ಅಕಾಲಿಕ ಮಳೆ ರೈತರಲ್ಲಿ ಆತಂಕ

ಬೆಂಗಳೂರು,ಜ.೭- ಇಂದು ಬೆಳಿಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ರಾಜ್ಯದ ಮಲೆನಾಡು ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಮಳೆಯಾಗುತ್ತಿದ್ದು, ಅಕಾಲಿಕ ಮಳೆಯಿಂದಾಗಿ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ.
ಬೆಳೆಗಳು ಕೊಯಿಲಿಗೆ ಬಂದಿವೆ. ಕೆಲವೆಡೆ ವಕ್ಕಣೆ ಆರಂಭಿಸಬೇಕಿದೆ. ಆದರೆ, ಅಕಾಲಿಕ ಮಳೆಯಿಂದ ರೈತರು ನಷ್ಟಕ್ಕೊಳಗಾಗುವ ಆತಂಕ ವ್ಯಕ್ತಪಡಿಸಿದ್ದಾರೆ.
ನಿನ್ನೆಯಿಂದಲೇ ಆರಂಭವಾದ ಮಳೆ, ರಾತ್ರಿ ತುಸು ಜೋರಾಗಿಯೇ ಬಿದ್ದಿದ್ದು, ಇಂದೂ ಸಹ ಮುಂದುವರೆದಿದೆ. ವಾತಾವರಣದಲ್ಲಿ ಮಳೆಯಿಂದಾಗಿ ಹೆಚ್ಚಿನ ತೇವಾಂಶ ಸೃಷ್ಟಿಯಾಗಿರುವುದರಿಂದ ತಂಗಾಳಿ ಬೀಸುತ್ತಿದ್ದು, ಚಳಿ ಹೆಚ್ಚಾಗಿದೆ.
ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ರಾತ್ರಿಯಿಂದಲೂ ಮಳೆ ಎಡಬಿಡದೆ ಸುರಿದ ಪರಿಣಾಮ ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದು, ಜನ ಪರದಾಡುವಂತಾಗಿದೆ.
ಹುಬ್ಬಳ್ಳಿ ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದ ೩-೪ ದಿನಗಳಿಂದಲೂ ಮೋಡ ಕವಿದ ವಾತಾವರಣವಿತ್ತು. ಆದರೆ, ಇಂದು ಬೆಳಿಗ್ಗೆ ಆರಂಭವಾಗಿರುವ ಜಿಟಿಜಿಟಿ ಮಳೆ ರೈತರಲ್ಲಿ ಆತಂಕ ಸೃಷ್ಟಿಸಿದೆ. ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ ಆರಂಭವಾದ ಜಿಟಿಜಿಟಿ ಮಳೆಯಿಂದ ಮತ್ತಷ್ಟು ಚಳಿ ಉಂಟಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಕಟಾವಿಗೆ ಬಂದಿರುವ ಶೇಂಗಾ, ಮೆಕ್ಕೆಜೋಳ, ಬಿಳಿಜೋಳ, ಕಡಲೆಕಾಯಿ ನಷ್ಟಕ್ಕೊಳಗಾಗುವ ಆತಂಕ ಸೃಷ್ಟಿಯಾಗಿದೆ.
ಬೀದರ್ ಜಿಲ್ಲೆಯ ಕೆಲ ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆಯಾಗಿದ್ದರೆ, ಮತ್ತೆ ಕೆಲವೆಡೆ ಮೋಡ ಕವಿದ ವಾತಾವರಣವಿದೆ. ವಿಜಯಪುರ ವ್ಯಾಪ್ತಿಯಲ್ಲಿ ತಡರಾತ್ರಿಯಿಂದಲೂ ಸುರಿಯುತ್ತಿರುವ ಮಳೆಯಿಂದ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ ಸೇರಿ ಇತರೆ ಬೆಳೆಗಳಿಗೆ ಹಾನಿಯಾಗುವ ಆತಂಕ ರೈತರಲ್ಲಿ ಮನೆಮಾಡಿದೆ.