ಅಕಾಲಿಕ ಮಳೆ, ಬಿರುಗಾಳಿ ಹೊಡೆತಕ್ಕೆ ಧರೆಗುರುಳಿದ ಬಾಳೆ, ದ್ರಾಕ್ಷಿ ಬೆಳೆ: ಅಪಾರ ಪ್ರಮಾಣದ ಹಾನಿ, ಕಣ್ಣೀರಿಟ್ಟ ರೈತರು

ರುದ್ರಪ್ಪ ಆಸಂಗಿ

ವಿಜಯಪುರ:ಮಾ.31:ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಬಿರುಗಾಳಿ ಸಮೇತ ಅಕಾಲಿಕ ಮಳೆ ಬಿದ್ದ ಪರಿಣಾಮ ಅಪಾರ ಪ್ರಮಾಣದ ಬಾಳೆ, ದ್ರಾಕ್ಷಿ ಬೆಳೆ ನೆಲಕ್ಕುರುಳಿದೆ. ರೈತರಿಗೆ ಅಪಾರ ನಷ್ಟವಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸ್ಥಗಿತಗೊಂಡು ಕೆಲ ಹೊತ್ತು ಜನ ಜೀವನ ಕೂಡಾ ಅಸ್ತವ್ಯಸ್ತವಾಗಿತ್ತು.
ವಿಜಯಪುರ ತಾಲೂಕಿನ ಬೊಮ್ಮನಳ್ಳಿ ಗ್ರಾಮದಲ್ಲಿ ಮುರುಗೆಪ್ಪ ಚೌಗುಲಾ ಎಂಬುವರಿಗೆ ಸೇರಿದ ತೋಟದಲ್ಲಿ ಸುಮಾರು ಒಂದು ಕಾಲು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಾಳೆ ಗಿಡಗಳು ಧರೆಗುರುಗಳಿದ್ದು, ಒಂದು ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು ಹಾನಿಗೀಡಾಗಿವೆ.
ಇಳುವರಿ ಕಟಾವು ಹಂತಕ್ಕೆ ಬಂದಿದ್ದ ಬಾಳೆ ಗಿಡಗಳು ನಾಶ ಹೊಂದಿದ್ದರದ ಸುಮಾರು 2 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ವಿದ್ಯುತ್ ಕಂಬಗಳು ಮುರಿದು ಬಿದ್ದು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ.
ಕಟಾವಿಗೆ ಬಂದ ಬೆಳೆ ಹಾಳಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ಕಂಗಾಲಾಗಿದ್ದಾರೆ. ಬರದ ದಿನಗಳಲ್ಲಿ ಬೆಳೆ ಕೈ ಹಿಡಿಯುತ್ತದೆ ಎಂಬ ರೈತನ ಬದುಕಿಗೆ ಅಕಾಲಿಕ ಮಳೆ ಬರೆ ಎಳೆದಿದೆ. ಇದರಿಂದ ರೈತರು ಮತ್ತಷ್ಟು ತತ್ತರಿಸಿ ಹೋಗಿದ್ದಾರೆ.
ಜೋರಾದ ಮಳೆ,ಗಾಳಿಗೆ ಮರ ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಇಂಡಿ ತಾಲೂಕಿನ ಹಳಗುಣಕಿ ಗ್ರಾಮದ ವಿಶ್ಚನಾಥ ಪಾಟೀಲ ಎಂಬುವರಿಗೆ ಸೇರಿದ ದ್ರಾಕ್ಷಿ ತೋಟಕ್ಕೆ ಹಾನಿಯಾಗಿದೆ.
ದ್ರಾಕ್ಷಿ ಸಾಲುಗಳ ಮೇಲೆ ವಿದ್ಯುತ್ ಕಂಬ, ಮರಗಳು ಬಿದ್ದ ಪರಿಣಾಮ ದ್ರಾಕ್ಷಿ ಸಾಲುಗಳು ಹಾಳಾಗಿವೆ.
ಗಾಳಿ ಸಹಿತ ಮಳೆಯಿಂದ ದ್ರಾಕ್ಷಿ ಬೆಳೆ ನೆಲಕಚ್ಚಿದೆ.
ವಿಜಯಪುರ ತಾಲೂಕಿನ ಗುಣಕಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಸತ್ತಿವೆ.
ಹಾನಿಗೀಡಾದ ರೈತರು ಕೂಡಲೇ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.