ಅಕಾಲಿಕ ಮಳೆ: ನಾಶದತ್ತ ಬೆಳೆಗಳು


ಲಕ್ಷ್ಮೇಶ್ವರ, ನ 20:- ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಜಮೀನುಗಳಲ್ಲಿನ ಬೆಳೆಗಳು ಜಲಾವೃತಗೊಂಡಿವೆ.
ರೈತರು ಈ ಬಾರಿ ತೋಟಗಾರಿಕಾ ಬೆಳೆಗಳಾದ ಮೆಣಸಿನಕಾಯಿ ಮತ್ತು ಈರುಳ್ಳಿ ಮೇಲೆ ಭರವಸೆಯನ್ನು ಹೊಂದಿದ್ದರು. ಮೆಣಸಿನಕಾಯಿ ಬೆಳೆ ಉತ್ತಮವಾಗಿ ಬೆಳೆದು ಫಸಲು ಹಂತದಲ್ಲಿದ್ದು ಆದರೆ ಒಂದೇ ಸಮನೆ ಮೋಡ ಮುಸುಕಿದ ವಾತಾವರಣ ಹಾಗೂ ಮಳೆ ಸುರಿಯುತ್ತಿರುವುದರಿಂದ ಜಮೀನುಗಳು ಜಲಾವೃತವಾಗಿ ಬೆಳೆ ಕೊಳೆಯುವ ಭೀತಿ ಎದುರಾಗಿದೆ. ಜಮೀನುಗಳಲ್ಲಿ ನೀರು ನಿಂತಿರುವುದರಿಂದ ಫಸಲು ಸಹ ಕೈಗೆಟುಕುವ ಸಾಧ್ಯತೆ ಕ್ಷೀಣಿಸುತ್ತಿದೆ.
ಅದೇ ರೀತಿ ಈರುಳ್ಳಿ ಸಹ ರೈತರ ಪಾಲಿಗೆ ಬಂಗಾರದ ಮೊಟ್ಟೆಯಂತೆ ಕಾಣುತ್ತಿದ್ದರೂ ಸಹ ಈಗ ಅದಕ್ಕೂ ಸಹ ಎಳ್ಳುನೀರು ಬಿಡುವ ಸ್ಥಿತಿ ನಿರ್ಮಾಣವಾಗಿದೆ ಎಲ್ಲೆಂದರಲ್ಲಿ ಜಮೀನುಗಳಲ್ಲಿ ನೀರು ತುಂಬಿಕೊಂಡು ನಿಂತಿರುವುದರಿಂದ ಬಹುತೇಕ ಬೆಳೆಗಳು ಕೊಳೆಯಿಂದ ನಾಶವಾಗುವ ಹಂತದಲ್ಲಿದೆ.
ಈ ಕುರಿತು ಯತ್ನಳ್ಳಿ ಗ್ರಾಮದ ರೈತರಾದ ಪ್ರಭುಗೌಡ ಸೂರಣಗಿ, ಗೋಣಪ್ಪಗೌಡರ ದ್ಯಾಮನಗೌಡ ಅವರು ಪ್ರತಿಕ್ರಿಯಿಸಿ ಕೈಗೆ ಬಂದ ತುತ್ತು ಬಾಯಿಗೆ ಬರುವಂತಾಗಿದೆ ಎಂದು ಹೇಳಿದರಲ್ಲದೆ ಸರ್ಕಾರ ಕೂಡಲೇ ಹಾನಿ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಕುಂಬಾರ ಪ್ರತಿಕ್ರಿಯಿಸಿ ಹವಾಮಾನ ವೈಪರೀತ್ಯದಿಂದಾಗಿ ಸುರಿಯುತ್ತಿರುವ ಮಳೆ ತೋಟಗಾರಿಕಾ ಬೆಳೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು ಬಹುತೇಕ ಬೆಳೆ ನಾಶವಾಗುವ ಭೀತಿಯಿದೆ. ಸರ್ಕಾರದ ನಿರ್ದೇಶನ ಬಂದರೆ ಕಂದಾಯ ಕೃಷಿ ತೋಟಗಾರಿಕೆ ಇಲಾಖೆಗಳ ಜಂಟಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬಹುದು ಎಂದು ಹೇಳಿದರು.