ಅಕಾಲಿಕ ಮಳೆಗೆ ರೈತ ಕಂಗಾಲು

ಲಕ್ಷ್ಮೇಶ್ವರ, ನ14: ವಾಯುಭಾರ ಕುಸಿತದಿಂದ ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಅಕಾಲಿಕ ಮಳೆ ನಿನ್ನೆ ಮಧ್ಯಾಹ್ನ ಸುರಿದು ರೈತರನ್ನು ನಿದ್ದೆಗೆಡಿಸಿದೆ.
ತಾಲೂಕಿನ ಬಹುತೇಕ ಭಾಗದಲ್ಲಿ ಅಕಾಲಿಕ ಮಳೆಗೆ ಬೆಳೆದುನಿಂತ ಹತ್ತಿ ಮೆಣಸಿನಕಾಯಿಗಳ ಮೇಲೆ ಪರಿಣಾಮ ಬೀರಿದ್ದು ಮಳೆಗೆ ಹತ್ತಿ ನೆಲಕ್ಕೆ ಬಿದ್ದು ಮಣ್ಣಾಗುವ ಭೀತಿ ಉಂಟಾದರೆ ಕೈಗೆ ಬಂದಿರುವ ಮೆಣಸಿನ ಹಣ್ಣು ಹಾಳಾಗುವ ಸಂಕಷ್ಟ ಎದುರಾಗಿದೆ. ಎಲ್ಲದಕ್ಕೂ ರೈತರು ಮುಂಗಾರಿನಲ್ಲಿ ಬಿತ್ತಿರುವ ಗೋವಿನಜೋಳ ತೆನೆ ಮುರಿದು ರಾಶಿ ಹಾಕಿದ್ದು ಕೆಲವರು ಯಂತ್ರಗಳ ಮುಖಾಂತರ ಗೋವಿನಜೋಳವನ್ನು ತೆನೆಯಿಂದ ಬೇರ್ಪಡಿಸಿದ್ದು ಸತತ ತಂಪಾದ ಹವಾಮಾನದಿಂದಾಗಿ ಕೂಡಿ ಹಾಕಿರುವ ಕಾಳುಗಳ ರಾಶಿಯಲ್ಲಿ ಮೊಳಕೆ ಒಡೆಯುತ್ತಿದೆ. ಮೊದಲೇ ಗೋವಿನ ಜೋಳದ ಬೆಲೆ ಕುಸಿತವಾಗಿದ್ದು ಮತ್ತಷ್ಟು ಬೆಲೆ ನೆಲಕಚ್ಚುವ ಭೀತಿ ಎದುರಾಗಿದೆ.
ಈ ಕುರಿತು ಟಿಎಪಿಸಿಎಂಎಸ್ ಉಪಾಧ್ಯಕ್ಷ ಸತೀಶ್ ಪಾಟೀಲ್ ಪ್ರತಿಕ್ರಿಯೆ ನೀಡಿ ಅಕಾಲಿಕ ಮಳೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ. ಅದೇ ರೀತಿ ಹುಲ್ಲೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ಎನ್. ಗಾಡಗೋಳಿ ಅವರು ಪ್ರತಿಕ್ರಿಯಿಸಿ ಅಕಾಲಿಕ ಮಳೆ ಗೋವಿನಜೋಳದ ಮೇಲೆ ಪರಿಣಾಮ ಬೀರಿದ್ದು ಮೊಳಕೆ ಬರುತ್ತಿರುವುದರಿಂದ ವ್ಯಾಪಾರಸ್ಥರು ಅತ್ಯಂತ ಕಡಿಮೆ ದರದಲ್ಲಿ ಖರೀದಿಸಲು ಮುಂದಾಗಿರುವುದು ರೈತರಿಗೆ ಕಂಬದ ಪೆಟ್ಟು ಕಪಾಳದ ಪೆಟ್ಟು ತಿನ್ನುವಂತೆ ಆಗಿದೆ ಎಂದು ಹೇಳಿರುವ ಅವರು ಜಿಲ್ಲಾ ಆಡಳಿತ ಈ ಕುರಿತು ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.