ಅಕಾಲಿಕ ಮಳೆಗೆ ಬೆಳೆ ನಷ್ಟ; ಪರಿಹಾರಕ್ಕೆ ರೈತರ ಒತ್ತಾಯ

ದಾವಣಗೆರೆ.ಮೇ.೨೭ : ಮೇ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ದಾವಣಗೆರೆ ಜಿಲ್ಲೆಯಲ್ಲಿ ಭತ್ತ ಮತ್ತು ತೋಟದ ಬೆಳೆಗಳು ಹಾಳಾಗಿದೆ. ರೈತರ ಹಾಗೂ ಬಡವರ ಮನೆಗಳು ಕುಸಿದು ಬಿದ್ದಿದ್ದು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘವು ಆಗ್ರಹಿಸುತ್ತದೆ ಎಂದು ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ತಾಲ್ಲೂಕಿನ ಕಸಬಾ ಹೋಬಳಿಗಳು ಮತ್ತು ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ , ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ , ಸಂತೇಬೆನ್ನೂರು ಹೋಬಳಿಗಳಲ್ಲಿ ಭತ್ತದ ಬೆಳೆಗಳು ಹಾಳಾಗಿದ್ದು, ನಷ್ಟ ಹೊಂದಿರುವ ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿದರು.ಭತ್ತ ಮಾರುಕಟ್ಟೆಯಲ್ಲಿ ಹಾಲಿ ರೂ . ೨೨೦೦ ರಿಂದ ೨೩೦೦ ರೂ.ದರ ಇದ್ದು , ಪ್ರಸ್ತುತ ೪೦-೫೦ ಚೀಲ ಇಳುವರಿ ಬರುತ್ತಿದ್ದು , ಪ್ರತಿ ಎಕರೆಗೆ  ೭೫,000 ರಿಂದ ೮೦,೦೦೦ ರೂ. ಆದಾಯ ಬರುತ್ತಿದ್ದು , ಅಕಾಲಿಕ ಮಳೆಯಿಂದ ಸುಮಾರು ೬೦,೦೦೦ ರೂ.ನಷ್ಟವಾಗುತ್ತಿದ್ದು , ಸರ್ಕಾರ ಭೂಮಿಯ ಉಳುಮೆ , ಗೊಬ್ಬರ , ನೆನು ಮತ್ತು ಕೂಲಿ ಕೆಲಸದ ಬಾಬ್ತು ಪ್ರತಿ ಎಕರೆಗೆ ೩೦೦೦೦ ರೂ.  ವೆಚ್ಚವಾಗುತ್ತದೆ.  ಹಾಗಾಗಿ ಪ್ರತಿ ಎಕರೆಗೆ ೫೦೦೦೦ ರೂಪಾಯಿ ಸರ್ಕಾರದಿಂದ ರೈತರ ಖಾತೆಗೆ ಜಮಾ ಮಾಡಬೇಕಾಗಿದೆ . ತೋಟದ ಬೆಳೆಗಳಾದ ಬಾಳೆ , ಎಲೆಬಳ್ಳಿ , ಮಾವು , ಇತರೆ ತೋಟಗಳು ಮಳೆ ಮತ್ತು ಆನೇಕಲ್ಲು ಮಳೆಯಿಂದ ಬೆಳೆ ನಾಶವಾಗಿದ್ದು , ಪ್ರತಿ ಎಕರೆಗೆ ರೂ .೭೫,೦೦೦ ಗಳನ್ನು ಸರ್ಕಾರ ಭರಿಸಬೇಕು . ಅತಿ ಬಡವರ ಮನೆಗಳು ಗಾಳಿ , ಮಳೆಯಿಂದ ಹೆಂಚುಗಳು ಮತ್ತು ತಗಡುಗಳು ಹಾರಿ ಹೋಗಿದ್ದು , ಮನೆಗಳಿಗೂ ಧಕ್ಕೆಯಾಗಿದೆ.  ಸರ್ಕಾರ ತಾತ್ಕಾಲಿಕ ಪರಿಹಾರವಲ್ಲದೆ , ಶಾಶ್ವತ ಪರಿಹಾರವಾಗಿ ಮನೆಗಳನ್ನು ನಿರ್ಮಿಸಿಕೊಡಬೇಕಾಗಿ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಸಾದ್, ರಾಂಪುರದ ಬಸವರಾಜ್, ಮಾಯಕೊಂಡದ ಅಶೋಕ್, ಐಗೂರು ಶಿವಮೂರ್ತಪ್ಪ, ಕೆ.ಹೆಚ್. ಪ್ರತಾಪ್, ದಶರಥ ರಾಜ, ಬಿಸಲೇರಿ ಮಲ್ಲಿಕಾರ್ಜುನಪ್ಪ, ಹಾಲೇಶ್, ಆಲೂರು ನಿಂಗರಾಜ್, ನಾಗರಾಜ್ ಐಗೂರು ಉಪಸ್ಥಿತರಿದ್ದರು.