ಅಕಾಲಿಕ ಮಳೆಗೆ ನೆಲಕ್ಕುರುಳಿದ ಭತ್ತ

ದೇವದುಗ.ಏ.೨೪-ತಾಲೂಕಿನ ವಿವಿಧೆಡೆ ಗುರುವಾರ ತಡರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ವಿವಿಧ ಬೆಳೆಗಳು ನೆಲಕ್ಕುರುಳಿದ್ದು, ರೈತರಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ.
ಗಬ್ಬೂರು, ಜಾಲಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಇದರಿಂದ ರಾಶಿ ಹಂತಕ್ಕೆ ಬಂದಿದ್ದ ಭತ್ತ ನೆಲಕ್ಕುರುಳಿದ್ದು, ಸುಮಾರು ನೂರಾರು ಎಕರೆ ರೈತರ ಜಮೀನಿನಲ್ಲಿ ನಾಟಿ ಮಾಡಿದ್ದ ಭತ್ತ ಬಿದ್ದಿದೆ. ಇದರಿಂದ ಕಾಳು ಕಟ್ಟಿದ್ದ ಬೆಳೆ ಹಾಳಾಗಿದೆ.
ನಾರಾಯಣಪುರ ಬಲದಂಡೆ ನಾಲೆಯಿಂದ ತಾಲೂಕಿನ ರೈತರು ಹಾಗೂ ಕೃಷ್ಣಾ ನದಿ ನೀರಿನಿಂದ ನದಿದಂಡೆ ಗ್ರಾಮದ ರೈತರು ಭತ್ತ, ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಬಹುತೇಕ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದು, ರಾಶಿ ಹಂತಕ್ಕೆ ಬಂದಿವೆ. ಈ ಹಂತದಲ್ಲಿ ತುಂತೂರು ಮಳೆ ಬಂದರೂ ಬೆಳೆ ಹಾಳಾಗಲಿವೆ. ಬಣ್ಣ ಕೆಡುವುದರಿಂದ ಬೆಲೆ ಕುಸಿಯುವ ಭೀತಿ ಎದುರಾಗಿದೆ.
ಭತ್ತ ನಾಟಿ, ರಸಗೊಬ್ಬರ, ಕ್ರಿಮಿನಾಶಕ, ಕೂಲಿಹಾಳು ಸೇರಿ ಪ್ರತಿ ಎಕರೆಗೆ ೪೦-೫೦ಸಾವಿರ ರೂ. ಹಾಗೂ ಮೆಣಸಿನಕಾಯಿ ಬೆಳೆಗೆ ಪ್ರತಿ ಎಕರೆ ಸುಮಾರು ೭೦-೮೦ಸಾವಿರ ರೂ. ಖರ್ಚು ಮಾಡಿದ್ದಾರೆ. ಬೆಳೆಗೆ ಲಕ್ಷಾಂತರ ರೂ. ಖರ್ಚು ಮಾಡಿದ್ದು, ಬೆಳೆ ಹಾನಿಯಿಂದ ಭಾರಿ ನಷ್ಟವಾಗುತ್ತಿದೆ. ಕೂಡಲೇ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ರೈತರಿಗೆ ವೈಜ್ಞಾನಿಕವಾಗಿ ಪರಿಹಾರ ನೀಡಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.

ಕೋಟ್
ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದ ಬಗ್ಗೆ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡುವೆ. ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ, ಸರ್ಕಾರದ ಮಾನದಂಡ ಪ್ರಕಾರ ರೈತರಿಗೆ ಪರಿಹಾರ ನೀಡಲು ಮೇಲಧಿಕಾರಿಗಳಿಗೆ ಪತ್ರ ಬರೆಯುವೆ.
ಮಧುರಾಜ್ ಯಾಳಗಿ, ತಹಸೀಲ್ದಾರ್