ಅಕಾಲಿಕ ಮಳೆಗೆ ಅನ್ನದಾತರು ಕಂಗಾಲು

ಬಾಬುಅಲಿ ಕರಿಗುಡ್ಡ
ದೇವದುರ್ಗ,ಏ.೩೦- ತಾಲೂಕಿನಲ್ಲಿ ಶುಕ್ರವಾರ ಸಂಜೆಯಿಂದ ಸುರಿದ ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದು, ಹಿಂಗಾರು ಬೆಳೆಗಳು ವರುಣನ ಅವಕೃಪೆಗೆ ಒಳಗಾಗಿವೆ. ಜಮೀನುಗಳಲ್ಲಿ ಒಣಗಲು ಹಾಕಿದ್ದ ಭತ್ತ, ಮೆಣಸಿನಕಾಯಿ ರಾಶಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ಅಕಾಲಿಕ ಮಳೆಯಿಂದ ರಾಶಿ ಮಾಡಿದ, ರಾಶಿ ಹಂತಕ್ಕೆ ಬಂದ ಬೆಳೆಗಳಿಗೆ ಹೊಡೆತ ಬಿದ್ದಿದೆ. ಡಿಸೆಂಬರ್‌ನಲ್ಲಿ ನಾಟಿ ಮಾಡಿದ ಭತ್ತದ ಬೆಳೆಗಳು ಸದ್ಯ ರಾಶಿ ಮಾಡಲಾಗುತ್ತಿದ್ದು ತಡವಾಗಿ ನಾಟಿಮಾಡಿದ ಭತ್ತ ಇನ್ನೂ ಕಟಾವು ಮಾಡಬೇಕಿದೆ. ಬಿರುಗಾಳಿ ಸಹಿತ ಮಳೆಯಿಂದ ರಾಶಿಗೆ ಬಂದಿದ್ದ ಭತ್ತ ನೆಲಕ್ಕುರುಳಿದ್ದು, ಒಂದೂವರೆ ತಿಂಗಳಿನಿಂದ ರಾಶಿ ಮಾಡಿ ಸಂಗ್ರಹಿಸಿದ್ದ ಮೆಣಸಿನಕಾಯಿಗೂ ಮಳೆಹೊಡೆತ ನೀಡಿದೆ.
ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿನೀರಿನಿಂದ ತಾಲೂಕಿನಲ್ಲಿ ಸುಮಾರು ೨೦ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಲಾಗಿದೆ. ಬಿಡಿಸಿ ಒಣಗಲು ಹಾಕಿದ್ದ ಮೆಣಸಿನಕಾಯಿ ರಾಶಿ ಕಣಕ್ಕೆ ನೀರು ನುಗ್ಗಿ ರೈತರಿಗೆ ಬರೆ ಎಳೆದಿದೆ. ಇನ್ನು ಕೆಲಕಡೆ ಬಿಳಿಕಾಯಿ ಆರಿಸಲು ಒಣಗಲು ಹಾಕಿದ್ದ, ಕಣದತುಂಬ ಹರಡಿಸಿದ್ದ ಮೆಣಸಿನಕಾಯಿ ನೀರು ನುಗ್ಗಿ ಹಾನಿಗೊಳಗಾಗಿದೆ.
ಒಂದೆಡೆ ಪ್ರಕೃತಿ ವಿಕೋಪ, ಇನ್ನೊಂದೆಡೆ ಬೆಲೆ ಇಳಿಕೆಗೆ ಅಕ್ಷರಶಃ ನಲುಗಿದ ರೈತರು ಮಗದೊಂದು ಕಡೆ ರಾಶಿ ಮಾಡಿದ ಭತ್ತ ಖರೀದಿ ಇಲ್ಲದೆ ಕಂಗಲಾಗಿದ್ದಾರೆ. ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಸರ್ಕಾರಕ್ಕೆ ರೈತರು ಹಲವು ಸಲ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ. ಇದರಿಂದ ರಾಶಿ ಮಾಡಿದ ಭತ್ತ ಖಾಲಿಜಾಗದಲ್ಲಿ ಸಂಗ್ರಹಿಸುತ್ತಿದ್ದಾರೆ. ಇನ್ನೊಂದು ಖಾಸಗಿ ವ್ಯಾಪಾರಿಗಳು ವಂಚನೆ ಮಾಡುತ್ತಿರುವ ಕಾರಣ ಭತ್ತ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಬೆಲೆ ಕುಸಿತದ ಭೀತಿ: ಮೆಣಸಿನಕಾಯಿ ಮಳೆಗೆ ತೊಯ್ದಿದ್ದರಿಂದ ಬೆಲೆ ಕುಸಿಯುವ ಭೀತಿ ಎದುರಾಗಿದೆ. ಸಾಮಾನ್ಯ ಬೆಳೆಗಳು ಒಂದೆರಡು ದಿನಗಳಲ್ಲಿ ಕಾಶಿ ಮಾಡಬಹುದು. ಮೆಣಸಿನಕಾಯಿ ಬೆಳೆ ರಾಶಿ ಮಾಡಲು ಕನಿಷ್ಠ ೨೦-೨೫ದಿನ ಹಿಡಿಯುತ್ತದೆ. ಕಾಯಿ ಬಿಡಿಸಿದ ನಂತರ ಒಣಗಲು ಹಾಕಿ, ಒಣಗಿದ ಕಾಯಿಗಳಲ್ಲಿ ಬಿಳಿಕಾಯಿ ಆರಿಸಿ ತೆಗೆದು ಬೇರ್ಪಡಿಸಬೇಕು. ಇದಕ್ಕೆ ಸಮಯ, ಜಾಗ, ಕೂಲಿಕಾರರು ಹೆಚ್ಚುಬೇಕು. ಬಹುತೇಕ ರೈತರು ಕಾಯಿಬಿಡಿಸಿ ಒಣಗಲು ಹಾಕಿದ್ದಾರೆ. ಮಳೆ ಬಂದಿದ್ದರಿಂದ ಕಾಯಿಗಳು ತೊಯ್ದು ಹಾಳಾಗಿದ್ದರೆ, ಕೆಲವು ಬಿಳಿಕಾಯಿಗೆ ಆಗುತ್ತಿವೆ. ಸದ್ಯಪ್ರತಿ ಕ್ವಿಂಟಾಲ್‌ಗೆ ೧೨ರಿಂದ ೧೫ಸಾವಿರ ರೂ. ಬೆಲೆಯಿದ್ದು ಮಳೆ ಬಂದ ಕಾರಣ ಬೆಳೆತೊಯ್ದು ಬೆಲೆ ಇಳಿಯುವ ಭೀತಿ ರೈತರಿಗೆ ಕಾಡುತ್ತಿದೆ. ಭತ್ತಕ್ಕೆ ಉತ್ತಮ ಬೆಲೆಯಿದ್ದರೂ ಮಳೆಯಿಂದ ತೊಯ್ದರೆ ಕಂದುಬಂದು ಬೆಲೆ ಕುಸಿಯಲಿದೆ.

ಕೋಟ್=====
ಅಕಾಲಿಕ ಮಳೆ ಅತಿಯಾಗಿ ಬಂದು, ತುಂಬ ನಷ್ಟವಾದರೆ ಮಾತ್ರ ಸರ್ಕಾರದಿಂದ ಪರಿಹಾರ ನೀಡಬಹುದು. ಶುಕ್ರವಾರ ಸಂಜೆ ಬಿರುಗಾಳಿ ಸಿತಿ ಮಳೆ ಸುರಿದಿದೆ. ಸಂಬಂಧಿಸಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸರ್ವೇ ಮಾಡಲು ತಿಳಿಸಲಾಗಿದೆ. ಹಾನಿಯಾದ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುತ್ತೇವೆ.

ಶ್ರೀನಿವಾಸ್ ಚಾಪೇಲ್
ಗ್ರೇಡ್-೨ ತಹಸೀಲ್ದಾರ್