ಅಕಾಲಿಕ ನಿಧನ ಹೊಂದಿದ ಪತ್ರಕರ್ತ ಮುರುಗೇಶ ಹಿಟ್ಟಿ ಕುಟುಂಬಕ್ಕೆ ಆರ್ಥಿಕ ನೆರವು

ವಿಜಯಪುರ:ಜು.29:ಇತ್ತೀಚೆಗೆ ಅಕಾಲಿಕ ನಿಧನ ಹೊಂದಿದ ಸಿಂದಗಿಯ ಹಿರಿಯ ಪತ್ರಕರ್ತ ಮುರುಗೇಶ ಹಿಟ್ಟಿ ಅವರ ಮನೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಓಂ ಯುವಕ ಗಡಿನಾಡು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಕಾನಿಪ ಕಾರ್ಯಕಾರಿಣಿ ಸದಸ್ಯ ಶಂಕರ ಹಾವಿನಾಳ ಅವರು ತಮ್ಮ ಸಂಸ್ಥೆಯ ವತಿಯಿಂದ ಐದು ಸಾವಿರ ರೂ.ಗಳ ಆರ್ಥಿಕ ನೆರವನ್ನು ದಿ.ಮುರುಗೇಶ ಅವರ ಧರ್ಮಪತ್ನಿಗೆ ಕೊಡಮಾಡಿದರು.
ಬಳಿಕ ಮಾತನಾಡಿದ ಕಾನಿಪ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಅವರು, ಪತ್ರಕರ್ತ ದಿ.ಮುರುಗೇಶ ಸ್ನೇಹಜೀವಿಯಾಗಿದ್ದು, ಪತ್ರಿಕೆಗಾಗಿ ಕಾರ್ಯನಿರತರಾಗಿದ್ದ ಸಮಯದಲ್ಲಿಯೇ ಆದ ಅಪಘಾತದಿಂದ ಅವರು ಚೇತರಿಸಿಕೊಳ್ಳಲೇ ಇಲ್ಲ. ನಿರಂತರ ಮೂರು ವರ್ಷ ಚಿಕಿತ್ಸೆಗೊಳಪಟ್ಟರೂ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದು ದುಃಖಕರ. ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘವು ಅವರ ಕುಟುಂಬಸ್ಥರ ನೋವಿನಲ್ಲಿ ಭಾಗಿಯಾಗುವುದಲ್ಲದೇ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ಸಹಾಯ ಒದಗಿಸಲು ಜಿಲ್ಲಾ ಘಟಕವು ಬದ್ಧವಾಗಿದ್ದು ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಕಾನಿಪ ಸಲಹಾ ಸಮಿತಿ ಸದಸ್ಯ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಶರಣು ಮಸಳಿ ಮಾತನಾಡಿ, ದಿ. ಮುರುಗೇಶ ಅವರು ಸಂಘಜೀವಿಯಾಗಿದ್ದು ಅನಾರೋಗ್ಯದ ಸ್ಥಿತಿಯಲ್ಲೂ ಸಂಘದ ಆಗುಹೋಗುಗಳ ಕುರಿತು ಆಗಾಗ ವಿಚಾರಿಸುತ್ತಿದ್ದರು. ಅವರ ಅನಿರೀಕ್ಷಿತ ಅಗಲಿಕೆ ನಮಗೆಲ್ಲ ತುಂಬ ನೋವು ತಂದಿದೆ ಎಂದರು.
ಕಾನಿಪ ಸಂಘದ ಜಿಲ್ಲಾ ಖಜಾಂಚಿ ರಾಹುಲ್ ಆಪ್ಟೆ, ಕಾನಿಪ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಖಜಾಂಚಿ ವಿಜಯಕುಮಾರ ಪತ್ತಾರ, ಪತ್ರಕರ್ತರಾದ ಪಂಡಿತ ಯಂಪೂರೆ, ರಮೇಶ ಪೂಜಾರಿ, ರವಿ ಮಲ್ಲೇದ, ಮಹಾಂತೇಶ ನೂಲಾನವರ, ಸಲೀಂ ಮರ್ತೂರ ಸುದರ್ಶನ ಜಂಗಣ್ಣಿ, ಸಲೀಂ ಜುಮನಾಳ, ಭೋಜರಾಜ ದೇಸಾಯಿ, ಗುರುರಾಜ ಮಠ, ರೇವಣಸಿದ್ಧೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಬಿರಾದಾರ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾನಿಪ ಸಂಘದ ನೆರವು : ಅಕಾಲಿಕ ನಿಧನ ಹೊಂದಿದ ಪತ್ರಕರ್ತ ಮುರುಗೇಶ ಹಿಟ್ಟಿ ಅವರ ಕುಟುಂಬಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೂ ಆರ್ಥಿಕ ನೆರವು ನೀಡಿದೆ.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ.ಚೂರಿ ಪ್ರಧಾನ ಕಾರ್ಯದರ್ಶಿ ಮೋಹನ ಕುಲಸಂಘದ ಸದಸ್ಯರಾದ ಟಿ.ಕೆ.ಮಲಗೊಂಡ, ಪಂಡಿತ ಯಂಪೂರೆ ಹಾಗೂ ಇನ್ನಿತರ ಪತ್ರಕರ್ತರು ಉಪಸ್ಥಿತರಿದ್ದರು.