ಅಕಾಲಿಕೆ ಮಳೆ: ಸಂಕಷ್ಟದಲ್ಲಿ ರೈತ

ಲಕ್ಷ್ಮೇಶ್ವರ, ಜ9- ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಏಕಾಏಕಿ ಮಳೆ ಗುಡುಗು ಸಿಡಿಲು ಮಿಶ್ರತ ಮಳೆಸುರಿದು ಜನಜೀವನ ಅಸ್ತವ್ಯಸ್ತಗೊಂಡಿತು.
ಈ ಅಕಾಲಿಕ ಮಳೆಯಿಂದಾಗಿ ಬೆಳೆದು ನಿಂತ ಜೋಳದ ಬೆಳೆ ಕಡಲೆ ಗೋಧಿ ಹಾಗೂ ಮಾವಿನ ತೋಟಗಳಿಗೆ ಭಾರಿ ಪರಿಣಾಮ ಬೀರಿದೆ. ಹೋದೆಯಾ ಪಿಶಾಚಿ ಎಂದರೆ ಗವಾಕ್ಷಿಯಲ್ಲಿ ಬಂದೆ ಎಂಬಂತೆ ಎರಡು ತಿಂಗಳ ಹಿಂದೆಯಷ್ಟೇ ಮುಂಗಾರು ಮತ್ತು ಹಿಂಗಾರು ಆರ್ಭಟಕ್ಕೆ ನಲುಗಿದ್ದ ರೈತರು ಹಿಂಗಾರಿ ಬೆಳೆಗಳಾದರೂ ಕೈಗೆ ಸಿಗಬಹುದು ಎಂದು ಆಸೆಗಣ್ಣಿನಿಂದ ನೋಡುತ್ತಿದ್ದರು.
ತಾನೊಂದು ಬಗೆದರೆ ದೈವವೊಂದು ಬಗೆಯಿತು ಎಂಬಂತೆ ಬಂಗಾಳಕೊಲ್ಲಿಯಲ್ಲಿ ನ ವಾಯುಭಾರ ಕುಸಿತದಿಂದಾಗಿ ಶುಕ್ರವಾರ ಮುಂಜಾನೆಯಿಂದಲೇ ವಿಪರೀತವಾದ ಶಕೆ ಮತ್ತು ಮೋಡಮುಸುಕಿದ ವಾತಾವರಣ ಇತ್ತು. ಸಂಜೆಯಾಗುತ್ತಿದ್ದಂತೆಯೇ ಲಕ್ಷ್ಮೇಶ್ವರ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಬಿರುಸಿನಿಂದ ಗುಡುಗು-ಸಿಡಿಲು ಮಿಂಚು ಸಹಿತ ಮಳೆ ಸುರಿಯಲಾರಂಭಿಸಿ ರೈತರು ಕೈ ಕೈ ಹಿಸುಕಿಕೊಂಡರು.
ಮಳೆಯಿಂದ ಚರಂಡಿಗಳೆಲ್ಲಾ ತುಂಬಿ ರಸ್ತೆಯ ಮೇಲೆಲ್ಲಾ ಬೃಹತ್ ಪ್ರಮಾಣದ ನೀರು ಹರಿದು ಬಂದು ಬೈಕ್ ಸವಾರರು ನಿಲ್ಲಿಸಿದ್ದ ಬೈಕುಗಳು ನೀರಿನಲ್ಲಿ ಸಿಲುಕಿದ ಬೈಕ್ ಸವಾರರು ಹರಸಾಹಸ ಪಟ್ಟು ನೀರಿನಿಂದ ಪಾರಾದರು.
ಅನೇಕ ತಗ್ಗುಪ್ರದೇಶಗಳಲ್ಲಿ ನೀರು ಬಂದಿದ್ದು ಆದರೆ ಯಾವುದೇ ಜೀವಹಾನಿ ಯಾಗಲಿ ಸಂಭವಿಸಿಲ್ಲ ಅಕಾಲಿಕವಾಗಿ ಸುರಿದ ಈ ಮಳೆಯಿಂದಾಗಿ ತೆನೆಗಟ್ಟುವ ಸ್ಥಿತಿಯಲ್ಲಿದ್ದ ಜೋಳದ ಬೆಳೆ ಕಪ್ಪು ವರ್ಣಕ್ಕೆ ಸಿಲುಕಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು. ಅಲ್ಲದೇ ಕಡಲೆ ಗೋಧಿ ಬೆಳೆಗೆ ಧಕ್ಕೆಯಾಗಲಿದೆ. ಹಾಗೂ ಹೂ ಬಿಡುತ್ತಿರುವ ಮಾವಿನ ಗಿಡಗಳಿಗೆ ಈ ಅಕಾಲಿಕ ಮಳೆಯಿಂದಾಗಿ ಹೂವುಗಳು ಉದುರುವ ಭೀತಿ ಬೂದು ರೋಗ, ಎಲೆ ಚುಕ್ಕಿ ರೋಗ, ರಸಹೀರುವ ಕೀಟಗಳು ಉಲ್ಬಣಗೊಳ್ಳಲಿವೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶ್ ಕುಂಬಾರ ಹೇಳಿದ್ದಾರೆ.
ಕೃಷಿ ಇಲಾಖೆಯ ಪ್ರಭಾರ ನಿರ್ದೇಶಕರಾದ ಚಂದ್ರಶೇಖರ್ ನರಸಮ್ಮನವರ ಈ ಅಕಾಲಿಕ ಮಳೆಯ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿ ಈ ಮಳೆಯಿಂದಾಗಿ ಜೋಳದ ಬೆಳೆಗೆ ಧಕ್ಕೆಯಾಗಲಿದೆ ಎಂದರು.