ಅಂಬೇಡ್ಕರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ

ಬೀದರ, ಏ 13: ರಾಜ್ಯದಲ್ಲಿ ಸಾರ್ವತ್ರಿಕ ವಿಧಾನ ಸಭೆ ಚುನಾವಣೆ-2023 ರ ನೀತಿ ಸಂಹಿತೆ ಜಾರಿಯಲ್ಲಿದ್ದು ಇದನ್ನು ಉಲ್ಲಂಘನೆಯಾಗದಂತೆ ಏಪ್ರಿಲ್ 14 ರಂದು ನಡೆಯುವ ಡಾ.ಬಿ.ಆರ್. ಅಂಬೇಡ್ಕರ ಅವರ 132 ನೇ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹೇಳಿದರು.

ಅವರು ಬುಧವಾರ ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕರೆದ ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಭಾರತವು ಮಾಹತ್ಮರು, ದಾರ್ಶನಿಕರು, ತತ್ವಜ್ಞಾನಿಗಳು ನಡೆದಾಡಿದ ತಾಣವಾಗಿದ್ದು ಇವರಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ ಸಹ ಒಬ್ಬರು. ಅವರು ಸಂವಿಧಾನÀ ಬರೆಯುವ ಮೂಲಕ ಸಮಾನತೆ ಸಾರಿದ ಮಹಾನ ನಾಯಕರಾಗಿದ್ದು ಮುಂದಿನ ಪೀಳಿಗೆಗೆ ಅವರ ಇತಿಹಾಸ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಅಂಬೇಡ್ಕರ ಅವರ ಜಯಂತಿಯನ್ನು ಕಳೆದ ಬಾರಿ ಆಚರಿಸಿದಂತೆ ನೀತಿ ಸಂಹಿತೆಯ ಚೌಕಟ್ಟಿನಲ್ಲಿ ಆಚರಿಸೋಣ. ಇದಕ್ಕೆ ಸಮಾಜ ಎಲ್ಲಾ ಭಾಂದವರು ಹಾಗೂ ಸಾರ್ವಜನಿಕರು ಸಹಕರಿಸಬೇಕು. ಏಪ್ರಿಲ್ 14 ರ ಜಯಂತಿ ದಿನದಂದು ಯಾವುದೆ ಅಹಿತಕರ ಘಟನೆಯಾಗದಂತೆ ಪೊಲೀಸ್ ಬಂದೊಬಸ್ತ್ ಕೈಗೊಳ್ಳಲಾಗುವುದು ಎಂದರು.

ಜಯಂತ್ಯೋತ್ಸವದ ಮೆರವಣಿಗೆಯಲ್ಲಿ ‘ಡಿಜೆ ಬಳಸುವಂತಿಲ್ಲ’, ರಾತ್ರಿ 10 ಗಂಟೆ ಒಳಗೆ ಮೆರವಣಿಗೆ ಮುಗಿಸಬೇಕು. ಯಾರು ಸಹ ಕಾನೂನು ಉಲ್ಲಂಘನೆ ಮಾಡಬಾರದು ಉಲ್ಲಂಘನೆ ಮಾಡಿದಲ್ಲಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುದು ಎಂದರು.

ಈ ಹಿಂದೆ ಜಯಂತಿ ಆಚರಣೆಗೆ ಹಾಗೂ ಮೆರವಣಿಗೆಗೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗುತಿತ್ತು ಆದರೆ ಪ್ರಸ್ತುತ ನೀತಿ ಸಂಹಿತೆ ಹಿನ್ನೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ಹಾಗೂ ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಚುನಾವಣಾಧಿಕಾರಿಗಳಿಂದ ಪರವಾನಗಿ ಪಡೆಯಬೇಕು. ಏಪ್ರೀಲ್ 14 ರ ನಂತರ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಅಂಬೇಡ್ಕರ ಜಯಂತಿ ಆಚರಿಸುವವರು ಪೊಲೀಸ್ ಬಂದೋಬಸ್ತಿಗೆ ಅನುಕೂಲವಾಗುವ ದೃಷ್ಟಿಯಿಂದ ಸಂಜೆ ಹೊತ್ತಿಗು ಮುನ್ನವೇ ಕಾರ್ಯಕ್ರಮ ಮುಗಿಸುವಂತೆ ಆಯೋಜನೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರು ಅಂಬೇಡ್ಕರ ಜಯಂತಿ ದಿನದಂದು ಮಧ್ಯದ ಅಂಗಡಿಗಳನ್ನು ಬಂದ ಮಾಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು ಇದಕ್ಕೆ ಉತ್ತರಿಸಿದ ಅವರು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು ಹಾಗೂ ಉತ್ಸವ ಸಮಿತಿಗೆ ಜಯಂತಿಯಂದು 50 ಜನರಿಗೆ ಒಬ್ಬರಂತೆ ವಾಲಿಂಟರ್ಸಗಳನ್ನು ನೇಮಕ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು ಎಂದರು.

ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೇಘಣ್ಣನವರ, ಪೊಲೀಸ್ ಉಪಾಧೀಕ್ಷಕ ಕೆ.ಎಂ. ಸತೀಶ, ಡಾ.ಬಿ.ಆರ್ ಅಂಬೇಡ್ಕರ ಉತ್ಸವ ಸಮಿತಿಯ ಅಧ್ಯಕ್ಷರಾದ ಬಾಬು ಪಾಸ್ವಾನ, ಕಾರ್ಯಾಧ್ಯಕ್ಷ ಉಮೇಶ ಸೋರಳಿಕರ್, ಗೌರವಾಧ್ಯಕ್ಷ ಅನಿಲಕುಮಾರ ಬೆಲ್ದಾರ, ಸಲಹೆಗಾರರಾದ ರಾಜಕುಮಾರ ಮೂಲಭಾರತೆ ಸೇರಿದಂತೆ ಇತರರು ಉಪಸ್ಥಿತರಿದ್ದರು.