ಅಂಬೇಡ್ಕರ್ ಹೆಸರೇಳಿಕೊಂಡು ದಲಿತರ ಮತ ಪಡೆಯುವ ಹುನ್ನಾರ: ಡಾ.ಕೆ.ಅನ್ನದಾನಿ ಆರೋಪ

ಸಂಜೆವಾಣಿ ವಾರ್ತೆ
ಮಂಡ್ಯ: ಏ.04:- ಸಂವಿಧಾನ ಬರೆದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರೇ ಎರಡು ಬಾರಿ ಸೋಲಿಸಿದರು. ಅವರು ಕಾನೂನು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೊಡಬಾರದ ಹಿಂಸೆ ಕೊಟ್ಟು ಅವರೇ ರಾಜೀನಾಮೆ ನೀಡುವಂತೆ ಮಾಡಿದರು.ಅವರು ಮರಣವಾದಾಗ ಅವರ ಮೃತದೇಹವನ್ನು ಹೂಳಲು ದೆಹಲಿಯಲ್ಲಿ ಒಂದಿಂಚು ಜಾಗ ನೀಡಲಿಲ್ಲ. ಅವರ ಮೃತದೇಹವನ್ನು ಮುಂಬೈಗೆ ತೆಗೆದುಕೊಂಡು ಹೋಗಲು ಸಹ ವಿಮಾನದ ವೆಚ್ಚ ಭರಿಸಲಿಲ್ಲ.ಅವರ ಹೆಸರೇಳಿಕೊಂಡು ದಲಿತರ ಮತ ಹುನ್ನಾರ ಮಾಡುತ್ತಿರುವ ನಿಮಗೆ ನೈತಿಕತೆ ಇದೆಯೇ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ನಾಯಕರು ದಲಿತರನ್ನು ಮತ ಬ್ಯಾಂಕಾಗಿ ಇಟ್ಟುಕೊಂಡಿದ್ದಾರೆಯೇ ಹೊರತು, ಇದುವರೆಗೂ ನ್ಯಾಯ ದೊರಕಿಸಿಕೊಟ್ಟಿಲ್ಲ. ನಿಜವಾದ ಜಾತಿವಾದಿ, ಕೋಮುವಾದಿ ಪಕ್ಷ ಎಂದರೆ ಕಾಂಗ್ರೆಸ್ ಎಂದು ಆರೋಪಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ 98 ಬಾರಿ ತಿದ್ದುಪಡಿ ಮಾಡಿದೆ. ಅಧಿಕಾರ ತಪ್ಪಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಬದಲಾಯಿಸಲು ಯಾವುದೇ ಪಕ್ಷದವರಿಗೆ ತಾಕತ್ತಿಲ್ಲ. ಒಂದುವೇಳೆ ತಿದ್ದಲು ಪ್ರಯತ್ನಿಸಿದರೆ ರಕ್ತಪಾತವೇ ಹರಿಯುತ್ತದೆ. ನರೇಂದ್ರ ಮೋದಿ ಅವರು ಸಂವಿಧಾನ ತಿದ್ದುಪಡಿ ಮಾಡುವುದಾಗಿ ಎಲ್ಲಿಯೂ ಹೇಳಿಲ್ಲ. ಇದೆಲ್ಲ ಕಾಂಗ್ರೆಸ್‍ನವರ ಪಿತೂರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚತೀರ್ಥ ಅಭಿವೃದ್ಧಿ: ಪ್ರಧಾನಿ ನರೇಂದ್ರ ಮೋದಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಪಂಚತೀರ್ಥಗಳನ್ನು ಅಭಿವೃದ್ಧಿಪಡಿಸಿದರು. ಆದರೆ, 60 ವರ್ಷ ಈ ದೇಶವನ್ನಾಳಿದ ಕಾಂಗ್ರೆಸ್‍ನವರು ಏಕೆ ಅಭಿವೃದ್ಧಿ ಮಾಡಲಿಲ್ಲ? ನಿಮಗೆ ಯೋಗ್ಯತೆ ಇರಲಿಲ್ಲವೇ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಡಾ. ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಮಂತ್ರಿ ಹುದ್ದೆ ತಪ್ಪಿಸಿದ್ದು ಇದೇ ಕಾಂಗ್ರೆಸ್‍ನವರು. ಇದಕ್ಕೆ ಕಾಂಗ್ರೆಸ್‍ನ ಮಹಾನಾಯಕರು ಉತ್ತರಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿರುವ ದಲಿತ ನಾಯಕರಿಗೆ ಅಂಬೇಡ್ಕರ್ ಬಗ್ಗೆ ಗೌರವವಿದ್ದರೆ ದಲಿತರ ಮತ ಕೇಳಬಾರದು ಎಂದರು.
ಎಚ್‍ಡಿಕೆ ಬೆಂಬಲಿಸಿ:ಬಹು ವರ್ಷಗಳಿಂದಲೂ ಸಮಸ್ಯೆಯಾಗಿಯೇ ಉಳಿದಿರುವ ಕಾವೇರಿ ನೀರಿನ ಹಂಚಿಕೆಯನ್ನು ಪರಿಹರಿಸಲು ಎಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಮಂತ್ರಿಯಾಗಲೇಬೇಕು. ಅದಕ್ಕಾಗಿ ದಲಿತ ಜನಾಂಗದವರು ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮತ ನೀಡುವ ಮೂಲಕ ಬಹುಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಅಂಬೇಡ್ಕರ್ ಅವರನ್ನು ಸೋಲಿಸಿದಂತೆ ಮುಖ್ಯಮಂತ್ರಿಯಾಗಬೇಕಿದ್ದ ಕಾಂಗ್ರೆಸ್ ಹಿರಿಯ ಮುತ್ಸದ್ದಿ ಡಾ. ಜಿ.ಪರಮೇಶ್ವರ್ ಅವರನ್ನು ಸೋಲಿಸಿ, ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ಯಾರು? 2008ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ತಪ್ಪಿಸಿದವರು ಯಾರು? ಬೆಂಬಲ ನೀಡದವರು ಯಾರು? ಇದರಲ್ಲಿ ಮಳವಳ್ಳಿ ಕ್ಷೇತ್ರದ ನಾಯಕನ ಪಾತ್ರವೂ ಇದೆ ಎಂದು ಶಾಸಕ ನರೇಂದ್ರಸ್ವಾಮಿ ಹೆಸರೇಳದೇ ಹರಿಹಾಯ್ದರು.
ಪತ್ನಿ ಗೆಲ್ಲಿಸಿಕೊಳ್ಳಲಾಗದ ಗುರುಪ್ರಸಾದ್:ದಲಿತರ ನಾಯಕ ಎಂದು ಹೇಳಿಕೊಳ್ಳುವ ಗುರುಪ್ರಸಾದ್ ಕೆರಗೋಡು ದಲಿತರ ನಾಯಕರಾದದ್ದು ಹೇಗೆ? ದಲಿತರ ಉದ್ಧಾರಕ್ಕಾಗಿ ನೀವು ಹೋರಾಟ ಮಾಡಿದ್ದೀರಾ? ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಿಮ್ಮ ಪತ್ನಿಯನ್ನು ನಿಲ್ಲಿಸಿ ಕೆಲವು ಸಾವಿರ ಮತ ಹಾಕಿಸಿ ಗೆಲ್ಲಿಸಿಕೊಳ್ಳಲಾಗದ ನೀವು, ಲಕ್ಷಾಂತರ ಮತ ಇರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸೋಲಿಸುವುದೇ ಗುರಿ ಎನ್ನುತ್ತೀರಾ?ಇದು ನಿಮ್ಮಿಂದ ಸಾಧ್ಯವಾ? ಯಾವ್ಯಾವ ಸಂದರ್ಭದಲ್ಲಿ ಯರ?ಯಾರಿಗೆ ಬೆಂಬಲ ನೀಡಿದ್ದೀರಿ ಎನ್ನುವ ದಾಖಲೆ ತರಲಾ ಮಿಸ್ಟರ್ ಕೆರಗೋಡು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಯಾರಿಗೆ ಅಧಿಕಾರ ನೀಡಿದೆ? ಅದೇ ಜಾ.ದಳದ ವರಿಷ್ಠರಾದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅವರು ಹಣವಿಲ್ಲದ ನನ್ನನ್ನು ಗುರುತಿಸಿ, ಎರಡು ಬಾರಿ ಶಾಸಕರನ್ನಾಗಿ ಮಾಡಿದ್ದಾರೆ. ಇದು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಗುರುಪ್ರಸಾದ್ ಕೆರಗೋಡು ಅವರನ್ನು ಅನ್ನದಾನಿ ತರಾಟೆಗೆ ತೆಗೆದುಕೊಂಡರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಜಾ.ದಳ ಪ.ಜಾತಿ ವರ್ಗದ ಅಧ್ಯಕ್ಷ ಸಾತನೂರು ಜಯರಾಮು, ಬಿಜೆಪಿ ಪ.ಜಾತಿ ವರ್ಗದ ಅಧ್ಯಕ್ಷ ನಿತ್ಯಾನಂದ, ಮುಖಂಡರಾದ ವೈರಮುಡಿ, ಸಿ.ಕೆ.ಪಾಪಯ್ಯ, ನರಸಿಂಹ, ಬೊಮ್ಮರಾಜು, ಕಾಂತರಾಜು, ಭದ್ರಾಚಲಮೂರ್ತಿ, ಶಂಕರ್ ಹಾಜರಿದ್ದರು.