ಅಂಬೇಡ್ಕರ್ ಸಮಾನತೆಯ ಹರಿಕಾರ

ಬೆಂಗಳೂರು,ಏ.೧೪- ಸಮ ಸಮಾಜದ ನಿರ್ಮಾಣ ಹಾಗೂ ಸಮಾನತೆಯ ಸಂದೇಶ ಬಾಬಾ ಸಾಹೇಬರ ಸಂವಿಧಾನದಲ್ಲಿ ಅಡಕವಾಗಿದೆ ಈ ಮೂಲಕ ನಾವು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸ್ಮರಿಸಬೇಕಿದೆ ಎಂದು ಶಾಸಕ, ಮಾಜಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಬ್ಯಾಟರಾಯನಪುರ ಕ್ಷೇತ್ರದ ಜಕ್ಕೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ೧೩೦ನೇ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಮಾಜದ ಎಲ್ಲಾ ವರ್ಗದ ಜನರಲ್ಲೂ ಸಮಾನತೆ ಸಿಗಬೇಕೆಂದು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದರು.

ಸಮಾನತೆ ತರಬೇಕೆಂಬುದು ಕಾಂಗ್ರೆಸ್ ಉದ್ದೇಶವಾಗಿತ್ತು.ಸ್ವಾತಂತ್ರ್ಯ ನಂತರ ಗಾಂಧೀಜೀ ಸೂಚನೆಯಂತೆ ಪ್ರಧಾನಿ ಜವಹಾರ್ ಲಾಲ್ ನೆಹರು ಪ್ರಧಾನಿಯಾದಾಗ ಭಾರತ ಸಂವಿಧಾನ ರಚಿಸಲು ಅಂಬೇಡ್ಕರ್ ಅವರಿಗೆ ಜವಾಬ್ದಾರಿ ವಹಿಸಿದ್ದರು.ಅದರಂತೆ ಸಂವಿಧಾನಕ್ಕೆ ಬೆಂಬಲ ನೀಡಿದ್ದು ನೆಹರು. ಇದರಿಂದ ಪ್ರಪಂಚದಲ್ಲಿ ಮಾದರಿ ಸಂವಿಧಾನ ಅದರ ಹೊಣೆ ಹೊತ್ತ ಅಂಬೇಡ್ಕರ್ ಪ್ರಪಂಚದಲ್ಲೆ ಮಾದರಿ ಸಂವಿಧಾನ ರೂಪಿಸಿದರು.

ಜಾತಿ ಧರ್ಮದ ಮೇಲೆ ಸಮಾನತೆ ಬಂದರಷ್ಟೆ ಸಾಲದು, ಜಾತಿಗಳ ನಡುವೆ ಸಮಾನತೆ ಜೊತೆಗೆ ರಾಜಕೀಯ, ಆರ್ಥಿಕ ಸಮಾನತೆ ಬರಬೇಕು ಎಂಬುದು ಅಂಬೇಡ್ಕರ್ ಆಶಯವಾಗಿತ್ತು.
ಸಾಮಾನ್ಯ ಜನರು ಜೀವನ ನಡೆಸುವುದು ದುಸ್ಥರವಾಗಿದೆ. ಅಂಬೇಡ್ಕರ್ ಶ್ರೀಮಂತರಿಂದ ತೆರಿಗೆ ಸಂಗ್ರಹಿಸಿ ಬಡವರಿಗೆ ಹಂಚಬೇಕೆಂಬುದು ಆಶಯವಾಗಿತ್ತು. ಆದರೆ,ಇಂದು ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ದಿನಬಳಕೆ ವಸ್ತುಗಳ ಮೇಲೆ ತೆರಿಗೆ ಬಾರ ಹಾಕಿ ಬಡವರಿಂದ ತೆರಿಗೆ ಸಂಗ್ರಹ ಮಾಡಿ, ಸರ್ಕಾರ ನಡೆಸುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.