ಅಂಬೇಡ್ಕರ್ ಸಂಘಕ್ಕೆ   ಚುನಾವಣೆ:  ಬಿರುಸಿನ ‌ಮತದಾನ:


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.18: ನಗರದ ಬಳ್ಳಾರಿ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸಂಘದ  ಕಾರ್ಯಕಾರಿ ಸಮಿತಿಯ  25 ಸದಸ್ಯ ಸ್ಥಾನಗಳಿಗೆ ಇಂದು ನಗರದ ಮುನಿಷಿಪಲ್ ಕಾಲೇಜಿನಲ್ಲಿ ಬಿರುಸಿನ ಮತದಾನ ನಡೆಯಿತು. ಸಂಜೆ 4 ಗಂಟೆ ನಂತರ ಮತಗಳ ಎಣಿಕೆ ನಡೆಯಲಿದೆ.
ಚುನಾವಣೆಗೆ ಮೂರು ತಂಡಗಳ 64 ಜನ ಆಕಾಂಕ್ಷಿಗಳು   ಸ್ಪರ್ಧಾ ಕಣದಲ್ಲಿದ್ದಾರೆ.‌ ಬರುವ ಮೂರು ವರ್ಷದ ಆಡಳಿತ ಅವಧಿಗೆ ಈ ಚುನಾವಣೆ ನಡೆಯುತ್ತಿದೆ.
ಬೆಳಿಗ್ಗೆ 9 ರಿಂದ ಸಂಜೆ 4 ವರೆಗೆ ಮತದಾನಕ್ಕೆ ವ್ಯವಸ್ಥೆ ಮಾಡಿತ್ತು.  ಒಂದು ಮತಗಟ್ಟೆಯಲ್ಲಿ 139 ಜನ ಸದಸ್ಯರಿಗೆ ಹಾಗು ಮತ್ತೊಂದು ಮತಗಟ್ಟೆಯಲ್ಲಿ 238  ಸೇರಿಂದತೆ 377 ಸದಸ್ಯರಿಗೆ  ಮತದಾನದ ಹಕ್ಕು ನೀಡಲಾಗಿತ್ತು.
ಬೆಳಿಗ್ಗೆಯಿಂದಲೇ ಮತದಾನ ಬಿರುಸಿನಿಂದ ಸಾಗಿತ್ತು. ಶೇ 90 ಕ್ಕಿಂತಲೂ ಹೆಚ್ಚು  ಮತದಾನ ಆಗಿರುವ ಬಗ್ಗೆ  ಮಾಹಿತಿ ಇದೆ.
ಸ್ಪರ್ಧೆಯಲ್ಲಿರುವ  64 ಜನ ಆಕಾಂಕ್ಷಿಗಳ ಪೈಕಿ  ಪತ್ರಿಕೆಗೆ ದೊರೆತ ಮಾಹಿತಿಯಂತೆ ಎರುಕುಲ ಸ್ವಾಮಿ ಮತ್ತು ಚಿದಾನಂದಪ್ಪ ಅವರ ಗುಂಪಿನಿಂದ 25 ಜನ, ವೀರಬಸಪ್ಪ ಅವರ ಗುಂಪಿನಿಂದ 17 ಜನ, ಟಿ.ಪಂಪಾಪತಿ ಅವರ ಗುಂಪಿನಿಂದ 22 ಜನ ಕಣದಲ್ಲಿದ್ದರು.
ಮತಗಟ್ಟೆ ಮುಂದೆ ಮೂರು ಗುಂಪುಗಳ ಮುಖಂಡರು, ಸ್ಪರ್ಧಾಳುಗಳು ನಿಂತು ತಮಗೆ ಮತ ನೀಡುವಂತೆ ಸದಸ್ಯರನ್ನು ಕೋರುವ ದೃಶ್ಯ ಸಾಮಾನ್ಯವಾಗಿತ್ತು.
ಮತದಾನ ಮತ್ತು ಎಣಿಕೆ ಪ್ರಕ್ರಿಯೆಗೆ 25 ಜನ ಸಿಬ್ಬಂದಿಯನ್ನು ನೇಮಕ ಮಾಡಿದೆ. ಸಂಜೆ 4 ರ ನಂತರ  ಮತಗಳ ಎಣಿಕೆ ನಡೆಯಲಿದ್ದು. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಸಂಘದ ಆಡಳಿತಾಧಿಕಾರಿ ನಾಗರಾಜ್ ಅವರು ಸಂಜೆವಾಣಿಗೆ ತಿಳಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ಆರಂಭದ ನಂತರ ಮತದಾನಕ್ಕೆ ಇನ್ನಿತರ ಸದಸ್ಯರು ನ್ಯಾಯಲಯದ ಮೂಲಕ ಅನುಮತಿ ಪಡೆದುಕೊಂಡು ಬಂದಿರುವುದರಿಂದ. ಬಲ್ಲ ಮೂಲಗಳ ಪ್ರಕಾರ ಚುನಾವಣೆಯ ಫಲಿತಾಂಶ ಘೋಷಣೆ ಇಂದು ಘೋಷಣೆ ಆಗುವ ಸಾಧ್ಯತೆ ಕಡಿಮೆ ಇದ್ದು, ನ್ಯಾಯಾಲಯಕ್ಕೆ ಸಲ್ಲಿಸಿ ಅದರ ಮುಂದಿನ ಆದೇಶಗಳಂತೆ ನಡೆಯುವ ಸಂದರ್ಭ ಒದಗಿ ಬಂದಿದೆ ಎನ್ನಲಾಗುತ್ತಿದೆ.