ಅಂಬೇಡ್ಕರ್ ವಿಶ್ವ ಶ್ರೇಷ್ಠ ಪತ್ರಕರ್ತರು: ಗೋವಿಂದರಾಜು

ಮಾನ್ವಿ,ಜೂ.೦೧-
ಡಾ.ಬಿ.ಆರ್.ಅಂಬೇಡ್ಕರ್‌ರವರು ಸಮಾಜದಲ್ಲಿ ಆಳವಾಗಿ ಬೇರೂರಿರುವ ಜಾತಿ ಮತ್ತು ಅನಿಷ್ಟ ಪದ್ಧತಿಗಳನ್ನು ಕಿತ್ತೊಗೆಯಲು ಪತ್ರಿಕೋದ್ಯಮವನ್ನು ಪ್ರಾರಂಭಿಸಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ವಂಚನೆಗೋಳಗಾಗಿದ್ದ ಅಸ್ಪೃಶ್ಯ ಮತ್ತು ಶೋಷಿತ ಸಮುದಾಯಗಳ ಏಳಿಗೆಗೆ ಶ್ರಮಿಸಿದ ವಿಶ್ವ ಶ್ರೇಷ್ಠ ಪತ್ರಕರ್ತರಾಗಿದ್ದಾರೆ ಎಂದು ಶಿಕ್ಷಕ ಹಾಗೂ ಪತ್ರಕರ್ತರಾದ ಗೋವಿಂದರಾಜು ಮಾನ್ವಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಾನ್ವಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ಸುಜಾತ – ಯಮುನಪ್ಪ ಜಾಗೀರಪನ್ನೂರು ಇವರ ಮನೆಯಲ್ಲಿ ಬಹುಜನ ಸಂಘರ್ಷ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ೬೦ನೇ ಮನೆ-ಮನೆಗೆ ಅಂಬೇಡ್ಕರ್ ಕಾರ್ಯಕ್ರಮದಲ್ಲಿ ಮುಖ್ಯಭಾಷಣಕಾರರಾಗಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಸಿರವಾರ ತಾಲೂಕ ಪಶುಸಂಗೋಪನ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಜು ಕಾಂಬ್ಳೆ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಮಹಿಳೆಯರಿಗೆ ತಂದೆಯ ಆಸ್ತಿಯಲ್ಲಿ ಪಾಲು, ಮರು ವಿವಾಹ ಇನ್ನಿತರ ಹಕ್ಕುಗಳು ಸೇರಿದಂತೆ ಸಂಪೂರ್ಣ ಅಭಿವೃದ್ದಿಗಾಗಿ ’ಹಿಂದೂ ಕೋಡ್’ ಬಿಲ್ ನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ಅದು ಜಾರಿಯಾಗದ ಕಾರಣ ಮಂತ್ರಿಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದ ಮಹಾನ್ ಮಹಿಳಾವಾದಿಯಾಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಬಹುಜನ ಸಂಘರ್ಷ ಸಮಿತಿ ಅಧ್ಯಕ್ಷ ಜೆ.ಶರಣಪ್ಪ ಬಲ್ಲಟಗಿ, ಬಸಂಸ ಮಹಾಪೋಷಕರು, ಹಿರಿಯ ಹೋರಾಟಗಾರರಾದ ಎಂ.ಆರ್.ಭೇರಿ ಮಾತನಾಡಿದರು. ಪಾಮನಕಲ್ಲೂರು ನಾಡಕಛೇರಿಯ ಉಪ ತಹಸೀಲ್ದಾರ ದೇವರಾಜ ಮಾನ್ವಿ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ದಲಿತ ಪ್ಯಾಂಥರ್ ರಾಯಚೂರು ಜಿಲ್ಲಾಧ್ಯಕ್ಷ ಲಕ್ಷ್ಮಣ ಜಾನೇಕಲ್ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ದುರುಗುಪ್ಪ ಸಾದಾಪೂರ, ಶ್ರಾವಣಕುಮಾರ್ ಮಾನ್ವಿ, ಸೀತಮ್ಮ ಲಾಜರ್ ಮಾನ್ವಿ, ಕೃಪಾವತಿ ನಾಗರಾಜ ಮಾನ್ವಿ, ಸಿದ್ಧಪ್ಪ ಯಡಿವಾಳ, ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.