ಅಂಬೇಡ್ಕರ್ ವಾದ ಡಿಎಸ್‍ಎಸ್ ವತಿಯಿಂದ ಗಣರಾಜ್ಯೋತ್ಸವ

ಸಂಜೆವಾಣಿ ವಾರ್ತೆ,
ವಿಜಯಪುರ,ಜ.27 :ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವಿಜಯಪುರ ಇವರ ವತಿಯಿಂದ ನಗರದ ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವೃತ್ತದಲ್ಲಿ 75ನೇ ಗಣರಾಜ್ಯೋತ್ಸವವನ್ನು ಕೇಕ್ ಕತ್ತಿರುಸವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಸಂಜು ವೈ. ಕಂಬಾಗಿ ಮಾತನಾಡಿ, ಭಾರತ ದೇಶವು ಹಲವು ಭಾಷೆಗಳಿಂದ, ಹಲವು ಜಾತಿಗಳಿಂದ, ಜಾತಿ ಜನಾಂಗಗಳಿಂದ ಕೂಡಿದ್ದು ಸಂವಿಧಾನವು ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದು ಭಾರತ ದೇಶದಲ್ಲಿ ಈಗಿರುವ ಕೇಂದ್ರ ಸರ್ಕಾರವು ಒಂದೇ ರಾಷ್ಟ್ರ ಒಂದೇ ಭಾಷೆ ಹಾಗೂ ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. 2019 ರಲ್ಲಿ ಈಡಬ್ಲ್ಯೂಎಸ್ ಶೇ.10ರಷ್ಟು ಮೀಸಲಾತಿಯನ್ನು ಕೇವಲ ಶೇ.3ರಷ್ಟು ಜನÀರಿಗೆ ಹಂಚಿದ್ದು ಸಂವಿಧಾನ ವಿರುದ್ಧ ಚಟುವಟಿಕೆಯಾಗಿದೆ. ಶೇ.50ರಷ್ಟು ಮೀಸಲಾತಿ ದಾಟಬಾರದು ಎನ್ನುವ ಸಂವಿಧಾನದ ಆಶಯವಿದ್ದರೂ ಕೂಡ ತಮ್ಮ ಸ್ವಾರ್ಥಕ್ಕೆ ಬೇಕಾದಂತೆ ಮನುವಾದಿಗಳು ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೆಳವರ್ಗದ ಎಲ್ಲ ಶೋಷಿತ ವರ್ಗದವರು ಸಂವಿಧಾನದ ಮಹತ್ವವನ್ನು ಇಂದು ತಿಳಿದುಕೊಳ್ಳುವುದು ಅತಿ ಅವಶ್ಯವಾಗಿದೆ ಎಂದರು.
ಮೊನ್ನೆ ಸಂಸತ್ ಭವನದ ಉದ್ಘಾಟನೆಗೆ ಗೌರವಾನ್ವಿತ ರಾಷ್ಟ್ರಪತಿಗಳು ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರೆಂದು ಅವರನ್ನು ಸಂಸತ್ ಭವನ ಉದ್ಘಾಟನೆಗೆ ಆಮಂತ್ರಿಸಲಿಲ್ಲ ಇದು ಖಂಡನೀಯ. ಆದರೆ ರಾಷ್ಟ್ರ ಕವಿ ಕುವೆಂಪು ಅವರು ಹೇಳಿದ ಹಾಗೆ ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಹಾಗೆ ಹಲವಾರು ಧರ್ಮಗಳಿದ್ದರೂ, ಹಲವಾರು ಭಾಷೆಗಳಿದ್ದರೂ, ಸಂವಿಧಾನದ ಅಡಿಯಲ್ಲಿ ಸಮಾನತೆ ಭ್ರಾತೃತ್ವ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶಗಳಲ್ಲಿ ಏಕೈಕ ದೇಶ ನಮ್ಮ ಭಾರತ ದೇಶವಾಗಿದೆ ಎಂದರು.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ದೊರೆತಿರುವುದು ಸಂವಿಧಾನದಿಂದ. ಸಂವಿಧಾನವನ್ನು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೆಳಮಟ್ಟದವರ ಹಿಡಿದು ಮೇಲ್ವರ್ಗದವರ ಈ ಸಂವಿಧಾನದಲ್ಲಿ ಅಡಗಿದೆ. ಆದರೆ ಅವಿವೇಕಿಗಳು ಅದನ್ನು ಮನಗಾಣಬೇಕಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಜನೇವರಿ 28 ರಂದು ಚಿತ್ರದುರ್ಗ ಚಲೋ ಕಾರ್ಯಕ್ರಮಕ್ಕೆ ಸಂಪೂರ್ಣವಾದ ಬೆಂಬಲವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸೂಚಿಸಿದೆ ಎಂದೂ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಯಲ್ಲಪ್ಪ ಕಾಂಬಳೆ, ಮಾಂತೇಶ ರಾಠೋಡ, ಶಂಕರ ಚಲವಾದಿ, ಮುರಗೇಶ ದಡ್ಡೇಣ್ಣವರ, ಮಹಿಳಾ ಸಂಚಾಲಕಿಯರಾದ ಸವಿತಾ ವಗ್ಗರ, ಸುವರ್ಣ ಮಾನಕರ, ಪರಶುರಾಮ ಚಲವಾದಿ, ಸುರೇಶ ಕಾಂಬಳೆ, ಜಗದೀಶ ಮಾನಕರ, ಶ್ರೀಮಂತ ಪವಾರ, ಉಪೇಂದ್ರ ಕಾಂಬಳೆ, ಮೋಹಶೀನ ಆಲಮೇಲ, ಅಲ್ಪರ ಅತ್ತಾರ, ದಿಲೀಪ ರಣದೇವಿ, ಆಕಾಶ ರಣದೇವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.