ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅವ್ಯವಸ್ಥೆ: ವಿದ್ಯಾರ್ಥಿಗಳ ಪ್ರತಿಭಟನೆ

ಕೊರಟಗೆರೆ, ನ. ೧೩- ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿನ ಅವ್ಯವಸ್ಥೆ, ಅಭದ್ರತೆ, ಹುಳು ಬಿದ್ದಿರುವ ಊಟ, ಪ್ರಾಂಶುಪಾಲರು ಬೋಧಕ ವರ್ಗದ ಕಿತ್ತಾಟ ಸೇರಿದಂತೆ ಹಲವು ಸಮಸ್ಯೆಗಳಿಂದ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರಿ ವಿದ್ಯಾಭ್ಯಾಸ ಮಾಡದ ಸ್ಥಿತಿ ಉಂಟಾಗಿದೆ ಎಂದು ಆರೋಪಿಸಿ ಪೋಷಕರು ವಸತಿ ಶಾಲೆಯಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆಯುತ್ತಿದ್ದ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಪೋಷಕರಿಗೆ ತಿಳಿಸಿದ ಪರಿಣಾಮ ವಿವಿಧ ತಾಲ್ಲೂಕುಗಳಿಂದ ಪೋಷಕರು ಮಕ್ಕಳೊಂದಿಗೆ ಆಗಮಿಸಿ ವಸತಿ ಶಾಲೆ ಪ್ರಾಂಶುಪಾಲರ ವಿರುದ್ದ ಪ್ರತಿಭಟನೆ ನಡೆಸಿ ವಾಗ್ವಾದಕ್ಕೆ ಇಳಿದಿದ್ದರು. ನಂತರ ಶಾಲೆಯ ಎಲ್ಲಾ ಮಕ್ಕಳನ್ನು ಒಂದಡೆ ಸೇರಿಸಿ ಪೋಷಕರ ಮುಂದೆ ಪ್ರಾಂಶುಪಾಲರು ಮತ್ತು ಬೋಧಕ ವರ್ಗ ಸಮಸ್ಯೆಗಳ ಬಗ್ಗೆ ಆಲಿಸಿದಾಗ ಬಹುತೇಕ ಮಕ್ಕಳು ಅಡುಗೆಯವರ ಬಗ್ಗೆ ಹಾಗೂ ಹಲವು ಬಾರಿ ಹುಳು ಬಿದ್ದ ಆಹಾರ ನೀಡಿದ್ದರ ಬಗ್ಗೆ ದೂರು ನೀಡಿದರು.
ವಿದ್ಯಾರ್ಥಿನಿಲಯದ ತಾತ್ಕಾಲಿಕ ಭದ್ರತಾ ಸಿಬ್ಬಂದಿ ಲೋಕೇಶ್ ಅನಗತ್ಯವಾಗಿ ಹೆಣ್ಣು ಮಕ್ಕಳ ಕೊಠಡಿಗೆ ಬಾಗಿಲು ತಟ್ಟಿ ಮುನ್ಸೂಚನೆ ನೀಡದೆ ವಿನಾ ಕಾರಣ ಬಂದು ತೊಂದರೆ ನೀಡುತ್ತಿರುವುದನ್ನು ಹೆಣ್ಣು ಮಕ್ಕಳು ಒಕ್ಕೊರಲಾಗಿ ದೂರು ನೀಡಿದರು. ಇಷ್ಟೆಲ್ಲಾ ಸಮಸ್ಯೆಗಳನ್ನು ಪ್ರಾಂಶುಪಾಲರ ಬಳಿ ಹೇಳಿದ್ದರೂ ಸಹ ತಿಪ್ಪೆ ಸಾರಿಸುವ ಕೆಲಸವನ್ನು ಅವರು ಮಾಡಿದ್ದನ್ನು ಪೋಷಕರ ಬಳಿ ತಿಳಿಸಿದರು.
ಪ್ರತಿಭಟನೆಯ ಸುದ್ದಿ ತಿಳಿದ ತಹಶೀಲ್ದಾರ್ ನಾಹೀದಾಜಮ್‌ಜಮ್ ಸ್ಥಳಕ್ಕೆ ಧಾವಿಸಿ ಊಟ ಮತ್ತು ಕೊಠಡಿ ಸ್ವಚ್ಚತೆ ಹಾಗೂ ಶೌಚಾಲಯವನ್ನು ಪರಿಶೀಲಿಸಿದರು.
ಆಹಾರ ದಾಸ್ತಾನು ಕೊಠಡಿಗೆ ಹೋದಾಗ ಕೆಲವು ಪದಾರ್ಥಗಳಲ್ಲಿ ಹುಳು ಬಿದ್ದಿರುವುದನ್ನು ಕಂಡು ಪ್ರಾಂಶುಪಾಲರಿಗೆ ತರಾಟೆಗೆ ತೆಗೆದುಕೊಂಡರು.
ಆಹಾರ ದಾಸ್ತಾನು ಪುಸ್ತಕ ಮತ್ತು ಊಟದ ಮೆನು ಚಾರ್ಟ್ ಈ ಎರಡನ್ನು ನಿರ್ವಹಿಸದೇ ಇದ್ದುದನ್ನು ಗಮನಿಸಿದರು. ನಂತರ ವಿದ್ಯಾರ್ಥಿನಿಲಯದ ಎಲ್ಲಾ ಹೆಣ್ಣು ಮಕ್ಕಳನ್ನು ಒಂದೆಡೆ ತರಗತಿಯಲ್ಲಿ ಕರೆಸಿ ಅವರ ಸಮಸ್ಯೆಗಳ ಬಗ್ಗೆ ಗುಪ್ತವಾಗಿ ಆಲಿಸಿ, ವೈಯಕ್ತಿಕ ಸಮಸ್ಯೆಗಳನ್ನು ತಿಳಿದ ನಂತರ ಹೊರ ಬಂದು ಪ್ರಾಂಶುಪಾಲರು ಮತ್ತು ಭದ್ರತಾ ಸಿಬ್ಬಂದಿ ವಿರುದ್ದ ಕೆಂಡಾಮಂಡಲವಾದರು.
ಕೂಡಲೇ ಕೊರಟಗೆರೆ ಪಿಎಸ್‌ಐ ನಾಗರಾಜು ಹಾಗೂ ಸಿಬ್ಬಂದಿಯವರನ್ನು ಕರೆಸಿ ಭದ್ರತಾ ಸಿಬ್ಬಂದಿ ಲೋಕೇಶ್‌ನನ್ನು ಅವರ ವಶಕ್ಕೆ ನೀಡಿ ಕೆಲಸದಿಂದ ವಜಾ ಮಾಡುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.
ಇಂತಹ ಸಿಬ್ಬಂದಿಯನ್ನು ಕೆಲಸದಲ್ಲಿ ಮುಂದುವರೆಸುವುದಕ್ಕೆ ಹಾಗೂ ಇಲ್ಲಿನ ಯಾವ ಸಮಸ್ಯೆಗಳನ್ನು ಪರಿಹರಿಸದ ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡು, ಅಡುಗೆ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ಮುಂಬರುವ ದಿನಗಳಲ್ಲಿ ವಸತಿ ಶಾಲೆಯಲ್ಲಿ ದೂರು ಪೆಟ್ಟಿಗೆಯನ್ನು ಇಡುವಂತೆ, ಅದರಲ್ಲಿ ಮಕ್ಕಳು ತಮ್ಮ ದೂರುಗಳನ್ನು ಹಾಕುವಂತೆ ಅದನ್ನು ಸ್ವತಃ ತಾವೇ ನಿರ್ವಹಿಸುವುದಾಗಿ ಹೆಣ್ಣು ಮಕ್ಕಳಿಗೆ ಭರವಸೆ ನೀಡಿ ಧೈರ್ಯ ತುಂಬಿದರು.
ಸ್ಥಳಕ್ಕೆ ಧಾವಿಸಿದ ಇಲಾಖಾ ಅಧಿಕಾರಿ ತ್ಯಾಗರಾಜು ತಹಶೀಲ್ದಾರ್ರಿಂದ ಪೋಷಕರಿಂದ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ದೂರು ನೀಡಿದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ಭರವಸೆಯನ್ನು ಪೋಷಕರಿಗೆ ನೀಡಿದರು.
ಪ್ರಾಂಶುಪಾಲರ ಅಸಮರ್ಥತೆ, ವಿದ್ಯಾರ್ಥಿನಿಯರ ಅಭದ್ರತೆ , ಮೂಲಭೂತ ಸೌಕರ್ಯ ಮತ್ತು ಸ್ವಚ್ಚತೆಯಿಲ್ಲದ ಶೌಚಾಲಯ, ಅಡುಗೆ ಮತ್ತು ವಸತಿ ಕೊಠಡಿಗಳು, ಬೋಧಕ ವರ್ಗದವರ ಒಳ ಕಿತ್ತಾಟ, ಮಹಿಳಾ ವಸತಿನಿಲಯವಿದ್ದರೂ ರಾತ್ರಿ ವೇಳೆ ಮಹಿಳಾ ಭದ್ರತಾ ಸಿಬ್ಬಂದಿ ಇಲ್ಲದಿರುವುದು, ರಾತ್ರಿ ವೇಳೆಯಲ್ಲಿ ಒಬ್ಬ ಶಿಕ್ಷಕಿಯಾದರೂ ಉಳಿಯದೇ ಇರುವುದು ಇಡೀ ವಸತಿ ಶಾಲೆಯ ಅವ್ಯವಸ್ಥೆ ಎದ್ದು ಕಾಣುತ್ತಿತ್ತು.