ಅಂಬೇಡ್ಕರ್ ವಸತಿ ಶಾಲೆಗೆ ಶಾಸಕರ ಭೇಟಿ-ಪರಿಶೀಲನೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ. ಜು.10:- ಹುಳುಕಾದ ಆಹಾರ ಪದಾರ್ಥಗಳು ಅದರಿಂದಲೇ ತಯಾರಿಸಿದ ಆಹಾರವನ್ನು ನಿತ್ಯ ತಿನ್ನಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ವಿದ್ಯಾರ್ಥಿಗಳು, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿ ನಿತ್ಯ ಕಿರುಕುಳದಲ್ಲಿಯೇ ಕಲಿಯುತ್ತಿರುವ ವಿದ್ಯಾರ್ಥಿಗಳು ಇದು ಶಾಸಕ ಎಚ್.ಟಿ.ಮಂಜು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಜೈನಹಳ್ಳಿ ಗ್ರಾಮದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿದಾಗ ಬೆಚ್ಚಿ ಬೀಳಿಸುವಂತಹ ದೃಶ್ಯಗಳು ಕಂಡು ಬಂದಿವೆ.
ವಸತಿ ಶಾಲೆಗೆ ಶನಿವಾರ ಸಂಜೆ ಆಕಸ್ಮಿಕವಾಗಿ ಶಾಸಕರು ಆಗಮಿಸುತ್ತಿದ್ದಂತೆಯೇ ಅವರನ್ನು ಸುತ್ತುವರಿದ ವಿದ್ಯಾರ್ಥಿ ಸಮೂಹ ಹೆಣ್ಣು ಗಂಡುಗಳ ಬೇದವಿಲ್ಲದೆ ವಸತಿ ನಿಲಯದಲ್ಲಿ ತಾವು ಅನುಭವಿಸುತ್ತಿರುವ ನೋವು ಮತ್ತು ಸಂಕಷ್ಠಗಳನ್ನು ತೋಡಿಕೊಳ್ಳಲಾರಂಭಿಸಿದರು. ವಸತಿ ನಿಲಯದ ಅಡುಗೆ ಮನೆ, ಉಗ್ರಾಣ ಮತ್ತಿತರ ಕಡೆ ಶಾಸಕರನ್ನು ಸ್ವತ: ಕರೆದೊಯ್ದ ವಿದ್ಯಾರ್ಥಿಗಳು ಹುಳು ಹಿಡಿದಿರುವ ಅಕ್ಕಿ, ಗೋದಿ, ರಾಗಿ, ಬೇಳೆ, ಬಟಾಣಿ, ಕಡಲೆ ಬೀಜ, ಕಡಲೆ ಹಿಟ್ಟು ಮುಂತಾದ ಎಲ್ಲಾ ಬಗೆಯ ಆಹಾರ ಪದಾರ್ಥಗಳನ್ನು ಶಾಸಕರಿಗೆ ತೋರಿಸಿದರು. ಮಕ್ಕಳಿಗಾಗಿ ಸಿದ್ದಪಡಿಸಿದ್ದ ಅನ್ನದಲ್ಲಿಯೇ ನೂರಾರು ಹುಳುಗಳು ಸತ್ತು ಬಿದ್ದಿರುವುದನ್ನು ಕಣ್ಣಾರೆ ಕಂಡ ಶಾಸಕರು ವಸತಿ ನಿಲಯದ ಪ್ರಾಂಶುಪಾಲ ಮಾರಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಶಿಕ್ಷಕರು ಸಮಾಜವನ್ನು ತಿದ್ದುವ ಶಿಲ್ಪಿಗಳಾಗಿರಬೇಕು. ಆದರೆ ಶಿಕ್ಷಕರಾದ ನೀವುಗಳೇ ಮಕ್ಕಳಿಗೆ ಹುಳು ಮಿಶ್ರಿತ ಆಹಾರ ಪದಾರ್ಥಗಳಿಂದ ಅಡುಗೆ ಸಿದ್ದಪಡಿಸಿ ಉಣ ಬಡಿಸುತ್ತೀದ್ದೀರಿ. ನಿಮ್ಮಂತಹ ವಂಚಕ ಶಿಕ್ಷಕರು ಮಕ್ಕಳಿಗೆ ಮಾದರಿಯಾಗಲು ಹೇಗೆ ಸಾಧ್ಯ? ನಿಮ್ಮಿಂದ ಕಲಿತ ಮಕ್ಕಳು ನಿಮ್ಮಂತೆಯೇ ಮೋಸಗಾರರಾಗುವುದಿಲ್ಲವೇ? ಎಂದು ಕುಪಿತಗೊಂಡರು. ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರವನ್ನು ಯಾವುದೇ ಕಾರಣಕ್ಕೂ ನೀಡಬಾರದು ಇದನ್ನು ನಾನು ಎಂದಿಗೂ ಸಹಿಸುವುದಿಲ್ಲ ಹೀಗೆ ಮುಂದುವರೆದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸರ್ಕಾರದಿಂದ ಪೂರೈಕೆಯಾಗುತ್ತಿರುವ ಗುಣಮಟ್ಟದ ಆಹಾರ ಸಾಮಗ್ರಿ ಏನಾಗುತ್ತಿದೆ. ಮಕ್ಕಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ನೀವು ಶಿಕ್ಷಕರಾಗಿರಲು ಅರ್ಹರಲ್ಲ. ಸದರಿ ಶಾಲೆಯ ವಿದ್ಯಾರ್ಥಿಗಳ ದುಸ್ಥಿಯ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ. ಬಡ ಮಕ್ಕಳ ಶಿಕ್ಷಣದ ಹಕ್ಕು ಕಸಿಯುವ ವಸತಿ ಶಾಲೆಗಳ ವ್ಯವಸ್ಥೆಯ ಬಗ್ಗೆ ರಾಜ್ಯದ ಗಮನವನ್ನು ಸೆಳೆಯುತ್ತೇನೆ ಮಕ್ಕಳ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಬಿದ್ದರೆ ಹೋರಾಟದ ಮಾರ್ಗ ಹಿಡಿಯುವುದಾಗಿ ಎಚ್ಚರಿಸಿದರು.
ಈ ವಸತಿ ಶಾಲೆಯಲ್ಲಿ 93 ಹೆಣ್ಣು ಮತ್ತು 156 ಗಂಡು ಮಕ್ಕಳು ಸೇರಿದಂತೆ ಒಟ್ಟು 249 ವಿದ್ಯಾರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳಿಗೆ ನಿಯಮಾನುಸಾರ ಊಟ ತಿಂಡಿ ನೀಡುತ್ತಿಲ್ಲ. ಕಳೆದ ವರ್ಷ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಡೆದ ಐತಿಹಾಸಿಕ ಕುಂಬಮೇಳದ ಸಂದರ್ಭದಲ್ಲಿ ಸಂಗ್ರಹವಾಗಿ ಮಿಕ್ಕಿದ್ದ ಅಕ್ಕಿ, ಗೋದಿ, ಬೇಳೆ ಮುಂತಾದ ಕಾಳು ಕಡ್ಡಿಗಳನ್ನು ತಾಲೂಕಿನ ವಸತಿ ಶಾಲೆಗಳಿಗೆ ನೀಡಲಾಗಿತ್ತು. ಈ ರೀತಿ ನೀಡಿದ ಆಹಾರ ಪದಾರ್ಥಗಳು ಸಂಪೂರ್ಣ ಹಾಳಾಗಿದ್ದರೂ ಅವುಗಳನ್ನೆ ಬಳಸಿ ಇಲ್ಲಿ ಮಕ್ಕಳಿಗೆ ಉಣ ಬಡಿಸಲಾಗುತ್ತಿದೆ. ಮಕ್ಕಳಿಗೆ ಹೊಟ್ಟೆ ತುಂಬ ಊಟ ನೀಡದೆ ಅರೆ ಹೊಟ್ಟೆಯ ಊಟ ನೀಡಲಾಗುತ್ತಿದೆ ಎನ್ನುವುದು ಮಕ್ಕಳ ಆರೋಪ.
ಹೆಣ್ಣು ಮಕ್ಕಳಿಗೆ ರಕ್ಷಣೆಯ ಕೊರತೆ:
ಶಾಲೆಯಲ್ಲಿ 93 ಹೆಣ್ಣು ಮಕ್ಕಳಿದ್ದರೂ ಇಲ್ಲಿ ಮಹಿಳಾ ವಾರ್ಡನ್ ಇಲ್ಲ. ಹೆಣ್ಣು ಮಕ್ಕಳೊಂದಿಗೆ ರಾತ್ರಿ ಮಲಗಲು ನರ್ಸ್ ಒಬ್ಬರನ್ನು ನಿಯೋಜಿಸಿದ್ದರೂ ಅವರು ಬರುತ್ತಿಲ್ಲ. ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಸೇಪ್ಟಿ ಪ್ಯಾಡ್ ಸೇರಿದಂತೆ ಯಾವುದೇ ಆರೋಗ್ಯದ ಕಿಟ್ ಗಳನ್ನು ಇಲ್ಲಿ ವಿತರಿಸಿಲ್ಲ. ಮಕ್ಕಳ ಉಪಯೋಗಕ್ಕೆ ನೀಡಿರುವ ಸೋಪು, ಟೂತ್ ಪೇಸ್ಟ್ ಮತ್ತಿತರ ಸಾಮಗ್ರಿಗಳನ್ನು ಮಕ್ಕಳಿಗೆ ವಿತರಿಸದೆ ಹಾಳು ಮಾಡಲಾಗಿದೆ. ಮಕ್ಕಳ ಬಳಕೆಗಾಗಿ ಕಬ್ಬಿಣದ ಮಂಚಗಳನ್ನು ನೀಡಿದ್ದರೂ ಅದನ್ನು ಮಕ್ಕಳ ಬಳಕೆಗೆ ನೀಡದೆ ಕೊಠಡಿಯೊಂದರ ಮೂಲೆಯಲ್ಲಿ ಬಿಸಾಡಿದ್ದು ಅವುಗಳು ತುಕ್ಕು ಹಿಡಿದು ಹಾಳಾಗಿವೆ. ಶಾಲಾ ಮಕ್ಕಳ ಪ್ರವಾಸಕ್ಕೆ ರಾಜ್ಯ ಸರ್ಕಾರ ಪ್ರತಿ ವಿದ್ಯಾರ್ಥಿಗೆ ತಲಾ 1200 ರೂಪಾಯಿ ಹಣ ನೀಡುತ್ತಿದೆ. ಈ ಹಣವನ್ನು ವಿದ್ಯಾರ್ಥಿಗಳಿಗೆ ನೀಡದೆ ವಂಚಿಸಿರುವ ಪ್ರಾಂಶುಪಾಲರು ವಿದ್ಯಾರ್ಥಿಗಳಿಂದಲೇ ತಲಾ 4 ಸಾವಿರ ರೂ ವಸೂಲಿ ಮಾಡಿ ಮಕ್ಕಳ ಪ್ರವಾಸ ಕಾರ್ಯಕ್ರಮ ಮಾಡಿದ್ದಾರೆ.
ಜಗ್ ನಲ್ಲಿ ಮೂತ್ರ:
ಶಾಲೆಯಲ್ಲಿ ಶೌಚಾಲಯವಿದ್ದರೂ ಅಲ್ಲಿ ವಿದ್ಯುತ್ ದೀಪಗಳನ್ನು ಹಾಕಿಲ್ಲ. ರಾತ್ರಿ ವೇಳೆ ಕತ್ತಲೆಯಲ್ಲಿ ಶೌಚಾಲಯಕ್ಕೆ ಹೋಗಲು ಮಕ್ಕಳಿಗೆ ಭಯವಾಗುತ್ತಿದೆ. ಇದರ ಪರಿಣಾಮ ಮಕ್ಕಳು ರಾತ್ರಿ ವೇಳೆ ಸ್ನಾನ ಮಾಡುವ ಜಗ್ ನಲ್ಲಿ ಮೂತ್ರ ವಿಸರ್ಜಿಸಿ ಬೆಳಿಗ್ಗೆ ಅದನ್ನು ಹೊರ ಚೆಲ್ಲುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ನಿಯಂತ್ರಣದಲ್ಲಿರುವ ಸದರಿ ಶಾಲೆಯ ನಿರ್ವಹಣೆ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಗೆ ಬರುತ್ತದೆ. ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಯಾವುದೇ ಅಧಿಕಾರಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿಲ್ಲ. ಕಾಲಕಾಲಕ್ಕೆ ಪೆÇೀಷಕರ ಸಭೆಗಳನ್ನು ಕರೆದು ಸಮಾಲೋಚನೆ ಮಾಡಿ ಮಕ್ಕಳ ಸಮಸ್ಯೆಗಳನ್ನು ಪೆÇೀಷಕರ ಸಮ್ಮುಖದಲ್ಲಿ ಆಲಿಸಿ ಅವುಗಳ ಪರಿಹಾರ ಮತ್ತು ಸುಧಾರಣೆಗೆ ಪ್ರಯತ್ನಿಸುತ್ತಿಲ್ಲ. ಇದರ ಪರಿಣಾಮ ವಸತಿ ಶಾಲೆಗಳಲ್ಲಿ ಪ್ರಾಂಶುಪಾಲರೇ ಸರ್ವಾಧಿಕಾರಿಗಳಾಗಿದ್ದು ಮಕ್ಕಳ ಶೋಷಣೆಯಲ್ಲಿ ನಿರತರಾಗಿದ್ದಾರೆ. ಇದೆಲ್ಲದರ ಸಮಗ್ರ ತನಿಖೆಯಾಗಬೇಕು. ವಸತಿ ಶಾಲೆಯಲ್ಲಿ ನಡೆಯುತ್ತಿರುವ ಮಕ್ಕಳ ಶೋಷಣೆ ನಿಲ್ಲಬೇಕು. ತಪ್ಪಿತಸ್ಥ ಶಿಕ್ಷಕರಿಗೆ ಶಿಕ್ಷೆಯಾಗಬೇಕು. ಈ ಬಗ್ಗೆ ಸದನದಲ್ಲಿ ತಾವು ಪ್ರಸ್ತಾಪ ಮಾಡುವುದಾಗಿ ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಈ ವೇಳೆ ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಬಸವರಾಜು, ಅಕ್ಕಿಹೆಬ್ಬಾಳು ಕಂದಾಯ ಶಿರಸ್ಥೆದಾರ್ ನರೇಂದ್ರ ಹಾಜರಿದ್ದು ಹುಳು ಹಿಡಿದ ಆಹಾರ ಧಾನ್ಯ ಮತ್ತಿತರ ಸಾಮಗ್ರಿಗಳ ಸ್ಯಾಂಪಲ್ ಸಂಗ್ರಹಿಸಿದರು.