ಅಂಬೇಡ್ಕರ್ ರ ಆದರ್ಶ ನಮಗೆಲ್ಲಾ ದಾರಿ ದೀಪ -ದುರುಗೇಶ

ಕೂಡ್ಲಿಗಿ.ನ.17:- ಜಾತಿ ವ್ಯವಸ್ಥೆಯಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಕೆಚ್ಚೆದೆಯಿಂದ ಬಾಲ್ಯದಲ್ಲಿ ಹೆದರಿಸಿ ದೇಶಕ್ಕೆ ಕಾನೂನೆಂಬ ಮಹಾ ಸಂವಿಧಾನ ರಚಿಸಿ ದೀನದಲಿತರ ಪಾಲಿಗೆ ದಾರಿದೀಪವಾದ ಮಹಾಮಹಿಮ ನಮ್ಮೆಲ್ಲಾರ ಮಹಾನಾಯಕರೇ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರು ಅವರ ಆದರ್ಶ ಇಂದು ನಮಗೆಲ್ಲಾ ದಾರಿದೀಪ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಎಸ್. ದುರುಗೇಶ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಐಗಳಮಲ್ಲಾಪುರದಲ್ಲಿ ಅಂಬೇಡ್ಕರ್ ಸಂಘ ಹಾಗೂ ದಲಿತಪರ ಸಂಘಟನೆಗಳು ಆಯೋಜಿಸಿದ ಝೀ ಕನ್ನಡದಲ್ಲಿ ಪ್ರಸಾರವಾಗುವ ಮಹಾನಾಯಕ ಧಾರಾವಾಹಿ ಕಲಾವಿದರಿಗೆ ಅಭಿನಂದನಾ ಬ್ಯಾನರ್ ನ್ನು ಉದ್ಘಾಟಿಸಿ ಮಾತನಾಡುತ್ತ ಅಂಬೇಡ್ಕರ್ ಬಾಲ್ಯದಲ್ಲಿ ಜಾತಿವ್ಯವಸ್ಥೆಯಲ್ಲಿ ಅನುಭವಿಸಿದ ಅನೇಕ ಅನುಭವಗಳು ಅಂದಿನ ವ್ಯವಸ್ಥೆ ಮೇಲ್ವರ್ಗದವರ ದಬ್ಬಾಳಿಕೆಯನ್ನು ಜಾತಿವ್ಯವಸ್ಥೆ ಸಮಾಜದಲ್ಲಿ ದೀನದಲಿತರ ಬದುಕು ಎಂತಹ ನಿಕೃಷ್ಟವಾಗಿತ್ತು ಎಂದು ಬಾಬಾಸಾಹೇಬರ ಜೀವನ ಶೈಲಿಯ ಮಹಾನಾಯಕ ಧಾರಾವಾಹಿ ತಪ್ಪದೆ ನೋಡಿ ಅವರ ಆದರ್ಶಗಳನ್ನು ಅಳವಡಿಸಿಕೊಂಡು ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ಮಹಾನಾಯಕ ಬಾಬಾಸಾಹೇಬರಿಗೆ ಕೊಡುವ ಗೌರವವೆಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಕಂದಗಲ್ಲು ಪರಶುರಾಮ ಮಾತನಾಡಿ ಇಂದು ಅನೇಕ ಧಾರಾವಾಹಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಮೋಜು ಮಸ್ತಿ ಧಾರಾವಾಹಿಗಳನ್ನು ನೋಡದೆ ಮಹಾನಾಯಕ ಧಾರಾವಾಹಿ ತಪ್ಪದೆ ದಲಿತ ಸಮುದಾಯ ನೋಡುವ ಮೂಲಕ ಬಾಬಾಸಾಹೇಬರು ದಿನ ದಲಿತ ಉದ್ದಾರಕ್ಕೆ ಶ್ರಮಿಸಿ ಸಂವಿಧಾನದಲ್ಲಿ ನೀಡಿದ ಮೀಸಲಾತಿ ಬಳಸಿಕೊಂಡು ಎಲ್ಲಾ ವರ್ಗದವರಂತೆ ನಾವು ಉನ್ನತ ವ್ಯಾಸಂಗ ಮತ್ತು ಹುದ್ದೆ ಪಡೆಯಲು ಮುಂದಾಗಬೇಕಿದೆ ತಪ್ಪದೆ ಮಕ್ಕಳಿಗೆ ಶಿಕ್ಷಣ ಕಲಿಸಲು ಮುಂದಾಗಿ ಅಂಬೇಡ್ಕರ್ ರ ಆದರ್ಶ ಪಾಲಿಸಿಕೊಂಡು ನಾವೆಲ್ಲರೂ ಮುನ್ನಡೆಯಬೇಕಿದೆ ಎಂದು ಪರಶುರಾಮ ತಿಳಿಸಿದರು.
ಈ ಸಂದರ್ಭದಲ್ಲಿ ಐಗಳಮಲ್ಲಾಪುರದ ಡಾ.ಬಿ.ಆರ್. ಅಂಬೇಡ್ಕರ್ ಸಂಘ, ದಲಿತ ಸಂಘರ್ಷ ಸಮಿತಿ ಸೇರಿದಂತೆ ತಾಲೂಕು ಮತ್ತು ಗ್ರಾಮದ ದಲಿತಪರ ಸಂಘಟನೆ ಪದಾಧಿಕಾರಿಗಳು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.