
ಕಲಬುರಗಿ,ಆ.16:ದೇಶದ 77ನೇ ಸ್ವಾತಂತ್ರ್ಯೋತ್ಸವದಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶಿಷ್ಠಾಚಾರದಂತೆ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಇಡದೇ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹಾಗೂ ಅತಿಥಿ ಉಪನ್ಯಾಸಕರು ಅಹೋರಾತ್ರಿ ವಿಶ್ವವಿದ್ಯಾಲಯದ ಕಾರ್ಯಸೌಧದ ಎದುರು ಧರಣಿ ಸತ್ಯಾಗ್ರಹ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕುಲಪತಿ ಪ್ರೊ. ದಯಾನಂದ್ ಅಗಸರ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನೆಕಾರರು ಭಾರತದ ಸ್ವಾತಂತ್ರ್ಯೋತ್ಸವದಂದು ಮಹಾತ್ಮಾಗಾಂಧಿ ಅವರ ಭಾವಚಿತ್ರದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನೂ ಸಹ ಇಡುವುದು ಕಡ್ಡಾಯವಾಗಿದೆ. ಈ ಕುರಿತು ಸರ್ಕಾರದ ಆದೇಶವೂ ಇದೆ. ಆದಾಗ್ಯೂ, ಕುಲಸಚಿವ ಶರಣಪ್ಪ ಅವರ ನಿರ್ಲಕ್ಷ್ಯದಿಂದಾಗಿ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಇಡದೇ ಅವಮಾನ ಮಾಡಲಾಗಿದೆ. ಆದ್ದರಿಂದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕುಲಸಚಿವರ ನಿರ್ಧಾರದಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ಅತಿಥಿ ಉಪನ್ಯಾಸಕರಿಗೆ ಅತ್ಯಂತ ನೋವಾಗಿದೆ. ಕೂಡಲೇ ಕುಲಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕುಲಪತಿ ಪ್ರೊ. ದಯಾನಂದ್ ಅಗಸರ್ ಅವರು ಮಾತನಾಡಿ, ಸ್ವಾತಂತ್ರ್ಯೋತ್ಸವದ ನಿಮಿತ್ಯ ಕಾರ್ಯಸೌಧದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ನಂತರ ರಾಷ್ಟ್ರಧ್ವಜಾರೋಹಣ ಮಾಡಲಾಗಿದೆ. ಆದಾಗ್ಯೂ, ರಾಷ್ಟ್ರಧ್ವಜಾರೋಹಣದ ಸ್ಥಳದಲ್ಲೂ ಡಾ. ಅಂಬೇಡ್ಕರ್ ಅವರ ಭಾವಚಿತ್ರ ಇಡಬೇಕಾಗಿತ್ತು ಎಂಬುದು ಪ್ರತಿಭಟನೆಕಾರರ ವಾದವಾಗಿದೆ. ಆ ಕುರಿತು ಪರಿಶೀಲಿಸುವೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಡಾ. ಅಂಬೇಡ್ಕರ್ ಅವರ ಭಾವಚಿತ್ರ ಇಡದೇ ಅವಮಾನ ಮಾಡಿದ್ದರಿಂದ ದೂರು ದಾಖಲಿಸಬೇಕು ಎಂದೂ ಪ್ರತಿಭಟನೆಕಾರರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಗೌತಮ್ ಕರಿಕಲ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ. ಅನಿಲ್ ಟೆಂಗಳಿ, ಡಾ. ಬೀಳಗಿ, ಮಹಾದೇವಸ್ವಾಮಿ ಅವರೂ ಸೇರಿದಂತೆ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.