ಅಂಬೇಡ್ಕರ್ ಭವನಗಳ ಸಮರ್ಪಕ ಬಳಕೆ ನಿರ್ಧಾರ: ಎಚ್‌ಸಿಎಂ


ಬೆಂಗಳೂರು, ಜು. ೫- ರಾಜ್ಯದ ವಿವಿಧೆಡೆ ನಿರ್ಮಾಣವಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನಗಳ ಸ್ಥಿತಿಗತಿಯ ಬಗ್ಗೆ ವರದಿಯನ್ನು ಕೇಳಿದ್ದೇನೆ. ಈ ವರದಿ ಬಂದ ನಂತರ ಭವನಗಳ ಸಮರ್ಪಕ ಬಳಕೆ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಅಪ್ಪಾಜಿ ಜಿ. ನಾಡಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಮಹದೇವಪ್ಪ ಅವರು, ರಾಜ್ಯದಲ್ಲಿ ೭೬೮೦ ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಹಾಗೆಯೇ ಈ ಭವನಗಳು ಎಷ್ಟು ಉಪಯುಕ್ತವಾಗುತ್ತಿವೆ, ಯಾವ ಭವನಗಳು ಬಳಕೆಯಾಗುತ್ತಿವೆ ಎಂಬ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಈ ಭವನಗಳನ್ನು ಬಹು ಉಪಯೋಗಿ ಭವನಗಳನ್ನಾಗಿ ರೂಪಿಸುವ ಬಗ್ಗೆ ತೀರ್ಮಾನ ಮಾಡುತ್ತೇವ ಎಂದರು.
ಈ ಅಂಬೇಡ್ಕರ್ ಭವನಗಳಲ್ಲಿ ಪರಿ
ಶಿಷ್ಟ ಜಾತಿ ಪಂಗಡದವರಿಗೆ ತರಬೇತಿ ನೀಡುವುದು, ಇತರ ಸಾಮಾಜಿಕ ಕಾರ್ಯಗಳಿಗೆ ಬಳಕೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಈ ಅಂಬೇಡ್ಕರ್ ಭವನಗಳನ್ನು ಸದ್ಬಳಕೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಅಗತ್ಯತೆಯ ಆಧಾರದ ಮೇಲೆ ಡಾ. ಬಿ.ಆರ್. ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡುತ್ತೇವೆ. ಹಿಂದೆಲ್ಲಾ ಬೇಕ್ಕಾಬಿಟ್ಟಿಯಂತೆ ಅಂಬೇಡ್ಕರ್ ಭವನಗಳ ನಿರ್ಮಾಣಕ್ಕೆ ಹಣ ಮಂಜೂರು ಮಾಡಿರುವುದು ಅಂಬೇಡ್ಕರ್ ಭವನಗಳನ್ನು ಪೂರ್ಣಗೊಳಿಸಲು ಆಗಿಲ್ಲ. ಹಾಗಾಗಿ ಗ್ರಾಮ ಮಟ್ಟಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ೨೦ ಲಕ್ಷ, ಹೋಬಳಿ ಮಟ್ಟದಲ್ಲಿ ೭೫ ಲಕ್ಷ, ತಾಲ್ಲೂಕು ಮಟ್ಟದಲ್ಲಿ ೨ ಕೋಟಿ ಹಾಗೂ ಜಿಲ್ಲಾ ಮಟ್ಟದಲ್ಲಿ ೪ ಕೋಟಿ ರೂ. ಅನುದಾವನ್ನು ನಿಗದಿಪಡಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯಾದ್ಯಂತ ಡಾ. ಬಿ. ಆರ್. ಅಂಬೇಡ್ಕರ್ ಭವನಗಳ ಸ್ಥಿತಿಗತಿಗಳ ವರದಿ ಬಂದ ನಂತರ ಅಪೂರ್ಣವಾಗಿರುವ ಭವನಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.