ಅಂಬೇಡ್ಕರ್‌ ಭವನಕ್ಕೆ ಹೆಚ್ಚುವರಿ ೨ ಕೋ.ರೂ. ಅನುದಾನ: ಕೋಟ

ಮಂಗಳೂರು, ಜು.೨೦- ನಗರದ ಉರ್ವದಲ್ಲಿರುವ ಜಿಲ್ಲಾ ಅಂಬೇಡ್ಕರ್ ಭವನವನ್ನು ಮುಂದಿನ ದಿನಗಳಲ್ಲಿ ಪುರಭವನಕ್ಕೆ ಪರ್ಯಾಯವಾಗಿ ಮತ್ತೊಂದು ಭವನವನ್ನಾಗಿ ರೂಪಿಸುವ ದೃಷ್ಟಿಯಿಂದ ಹೆಚ್ಚುವರಿ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಉರ್ವಸ್ಟೋರ್‌ನಲ್ಲಿರುವ ಅಂಬೇಡ್ಕರ್ ಭವನಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅಂಬೇಡ್ಕರ್ ಭವನ ಉದ್ಘಾಟನೆಯಾದ ಬಳಿಕ ಕೆಲವೊಂದು ವ್ಯವಸ್ಥೆ ಬಾಕಿಯಿದ್ದ ಕಾರಣದಿಂದ ಸಾರ್ವಜನಿಕರಿಗೆ ಲಭ್ಯವಿರಲಿಲ್ಲ. ಇದನ್ನು ಮನಗಂಡು ಮೇಯರ್, ಉಪಮೇಯರ್, ಹಿರಿಯ ಅಧಿಕಾರಿಗಳ ಜತೆ ಅಂಬೇಡ್ಕರ್ ಭವನ ಪರಿಶೀಲಿಸಿ ಸಭೆ ನಡೆಸಿದ್ದೇನೆ. ಅಂಬೇಡ್ಕರ್ ಭವನವನ್ನು ಮತ್ತಷ್ಟು ಸುಸಜ್ಜಿತಗೊಳಿಸಿ ಸಾರ್ವಜನಿಕ ಕಾರ್ಯಕ್ರಮಳಿಗೆ ನೀಡುವ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ವೇದಿಕೆಗೆ ಸುವ್ಯವಸ್ಥಿತ ನೆಲಹಾಸು, ಪರದೆ ವ್ಯವಸ್ಥೆ, ಲೈಟಿಂಗ್ ಮತ್ತು ಸೌಂಡ್ ಸಿಸ್ಟಂ, ಅಗ್ನಿಶಾಮಕ ವ್ಯವಸ್ಥೆ ಸಹಿತ ಇತರ ಕಾಮಗಾರಿಗಳಿಗೆ ಅಂದಾಜು 2 ಕೋ.ರೂ. ಯೋಜನಾ ವರದಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಇದಕ್ಕೆ ಮಹಾನಗರಪಾಲಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಅನುದಾನ ಮತ್ತು ರಾಜ್ಯ ಸರಕಾರದಿಂದಲೂ ಅನುದಾನ ನೀಡಲಾಗುವುದು. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಭವ್ಯವಾದ ಭವನವು ನಗರದ ಹೃದಯಭಾಗದಲ್ಲೇ ಇದ್ದು, ಎಲ್ಲ  ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ನಗರದ ಪುರಭವನಕ್ಕೆ ಪರ್ಯಾಯ ರೀತಿಯಲ್ಲಿ ಈ ಭವನ ಗಮನಸೆಳೆಯುತ್ತಿದೆ. ಮುಂದಿನ ೨ ತಿಂಗಳೊಳಗೆ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಸಭಾಭವನ ಬಿಟ್ಟುಕೊಡುವ ಉದ್ದೇಶ ಹೊಂದಲಾಗಿದೆ ಎಂದರು. ಅಂಬೇಡ್ಕರ್ ಭವನ ಬಾಡಿಗೆಗೆ ಸಂಬಂಧಪಟ್ಟಂತೆ ಮಹಾನಗರಪಾಲಿಕೆ ಈಗಾಗಲೇ ಒಂದು ನಿಯಮಗಳನ್ನು ರೂಪಿಸಿದೆ. ಪುರಭವನಕ್ಕೆ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ.50ರಷ್ಟು ರಿಯಾಯಿತಿಯಲ್ಲಿ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ  ಸರಕಾರಿ ಇಲಾಖೆಯ ಕಾರ್ಯಕ್ರಮಗಳು ಕೂಡಾ ಇಲ್ಲೇ ನಡೆಸುವ ಬಗ್ಗೆ ಚಿಂತಿಸಲಾಗಿದೆ. ನಿರಂತರ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಮತ್ತಷ್ಟು ಮೆರುಗು ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. ಈ ಸಂದರ್ಭ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲಾ ರಾವ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ಧಲಿಂಗೇಶ್ ಬೇವಿನಮತ್ತಿ, ಕಾರ್ಪೊರೇಟರ್ ಗಣೇಶ್ ಕುಲಾಲ್, ಇಂಜಿನಿಯರ್ ನರೇಶ್ ಶೆಣೈ, ಅಂಬೇಡ್ಕರ್ ಭವನ ವ್ಯವಸ್ಥಾನಾ ಸಮಿತಿ ಸದಸ್ಯ ವಿನಯ್ ನೇತ್ರ ದಡ್ಡಲ್‌ಕಾಡ್, ದಲಿತ ದೌರ್ಜನ್ಯ ವಿರೋಧಿ ಸಮಿತಿ ವಿಶ್ವನಾಥ್ ಚೆಂಡ್ತಿಮಾರ್ ಉಪಸ್ಥಿತರಿದ್ದರು.