ಅಂಬೇಡ್ಕರ್, ಬಾಬೂಜೀ ಆದರ್ಶಗಳು ಸಮಾನತೆಗೆ ದಾರಿದೀಪ

ತುಮಕೂರು, ಏ. ೨೦- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಭಾರತದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಮಾಡುವುದರಿಂದ ಮಾತ್ರ ಪ್ರಗತಿ ಆಗುವುದಿಲ್ಲ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆದಾಗ ಮಾತ್ರ ಸಮಾಜದ ಏಳ್ಗೆ ಮತ್ತು ಸಮಾನತೆ ಸಾಧ್ಯ ಎಂದು ಮೇಯರ್ ಬಿ.ಜಿ. ಕೃಷ್ಣಪ್ಪ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಸ್ಪತ್ರೆ ಆಡಿಟೋರಿಯಂನಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಸ್ವಯತ್ತ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ ತುಮಕೂರು ಶಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜಯಂತಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ ೧೧೪ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕಿ, ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಈ ಇಬ್ಬರು ಮಹನೀಯರನ್ನು ಏಪ್ರಿಲ್ ತಿಂಗಳಲ್ಲಿ ಮಾತ್ರ ನೆನಪಿಸುತ್ತೇವೆ. ಆದರೆ ಪ್ರತಿನಿತ್ಯ ಅವರನ್ನು ಪೂಜಿಸಬೇಕು, ತುಮಕೂರಿನಲ್ಲಿ ನಡೆದಾಡುವ ದೇವರೆಂದೇ ಸಿದ್ಧಗಂಗೆಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೆಸರುಗಳಿಸಿದ್ದರು. ಅದೇ ರೀತಿ ಈ ದೇಶಕ್ಕೆ ಸಂವಿಧಾನ ಕೊಟ್ಟಂತಹ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಹಸಿರುಕ್ರಾಂತಿಯ ಹರಿಕಾರರಾದ ಡಾ.ಬಾಬು ಜಗಜೀವನರಾಮ್ ಅವರು ಇಡೀ ರಾಷ್ಟ್ರಕ್ಕೆ ದೇವರಾಗಿದ್ದಾರೆ. ಎಲ್ಲರಿಗೂ ಸಮಾನತೆ ಸಿಗಲಿ ಎಂಬ ಆಸೆಯಿಂದ ರಾಷ್ಟ್ರಕ್ಕೆ ಸಂವಿಧಾನ ನೀಡಿದ್ದಾರೆ. ನಾನು ಈ ಸ್ಥಾನದಲ್ಲಿ ಇರಬೇಕಾದರೆ ಆ ಇಬ್ಬರು ಮಹಾನುಭಾವರೇ ಸಾಕ್ಷಿ ಎಂದರು.
ದಲಿತರೆಂಬ ಕೀಳರಿಮೆ ಬಿಡಬೇಕು, ಮಹಾಭಾರತ, ರಾಮಾಯಣ ಬರೆದವರು ದಲಿತರೆ. ಅಷ್ಟೇ ಏಕೆ, ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟಂತಹವರು ದಲಿತರೆ. ಆದ್ದರಿಂದ ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಸ್ವಯತ್ತ ಸಂಸ್ಥೆ ಪ.ಜಾತಿ, ಪ.ಪಂಗಡ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಡಾ.ಹೆಚ್.ಆರ್. ರಾಜಶೇಖರ್ ಮಾತನಾಡಿ, ಇತಿಹಾಸದ ಪುಟಗಳನ್ನು ತೆರೆದು ನೋಡಿದಾಗ ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ತನ್ನ ಜೀವನ ಹೇಗೆ ನಲುಗಿತು ಎಂಬುದನ್ನು ಅರಿತ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಮುಂದಿನ ದಿನಗಳಲ್ಲಿ ಭಾರತದ ಭವಿಷ್ಯ ಹೇಗೆ ಇರಬಲ್ಲದು ಎಂಬ ಕಲ್ಪನೆಯು ಮೂಡಿತ್ತು. ಇದರಿಂದ ಪ್ರೇರೇಪಿತರಾದ ಅವರು ಅಖಂಡ ಭಾರತದ ಉತ್ತಮ ಸಮಾಜಕ್ಕಾಗಿ ಕನಸು ಕಂಡು ಅದನ್ನು ಸಾಕಾರಗೊಳಿಸಬೇಕು ಎಂಬ ನಿಟ್ಟಿನಲ್ಲಿ ತನ್ನ ವೈಯುಕ್ತಿಕ ಜೀವನದ ಸುಖ ಸಂತೋಷಗಳನ್ನು ಬದಿಗಿಟ್ಟು ಭಾರತದ ವಿವಿಧ ರೀತಿಯ ಆಚರಣೆ, ರಾಜಕೀಯ ಧೋರಣೆಗಳು, ಸಮಾಜದ ಅನಿಷ್ಠ ಪದ್ಧತಿಗಳ ಬಗ್ಗೆ ವಿಶ್ಲೇಷಣೆ ಮಾಡಿ ಸಮ ಸಮಾಜ ನಿರ್ಮಿಸಲು ಯತ್ನಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತ ದೇಶ ಕಂಡ ಮಹಾ ಮಾನವತಾವಾದಿಯಾಗಿದ್ದಾರೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಕೂಡ ಪಾಲಿಸಕಬೇಕು. ಕೇವಲ ಒಂದು ಸಮುದಾಯವಲ್ಲ. ಭಾರತ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಅದನ್ನು ಅಳವಡಿಸಿಕೊಂಡರೆ ಉತ್ತಮ ದೇಶ, ಉತ್ತಮ ಸಮಾಜ, ಬಲಿಷ್ಠ ಭಾರತ ನಿರ್ಮಿಸಲು ಸಾಧ್ಯ ಎಂದರು.
ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರು ಕೂಡ ಶೋಷಿತರ ಹಕ್ಕುಗಳಿಗೆ ಹೋರಾಟ ನಡೆಸಿದ್ದಾರೆ. ಜತೆಗೆ ನಮ್ಮ ದೇಶದ ಜನರು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಅವರು ಹುಟ್ಟು ಹಾಕಿದ ಹಸಿರು ಕ್ರಾಂತಿ ಇಂದಿಗೂ ಬಲು ದೊಡ್ಡ ದಾಖಲೆಯಾಗಿದೆ. ಈ ಇಬ್ಬರು ಮಹನೀಯರು ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸುತ್ತಾ ಅವರ ಮೌಲ್ಯಗಳನ್ನು ಪಾಲನೆ ಮಾಡಬೇಕು ಎಂದರು.
ಕೋವಿಡ್-೧೯ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ಈ ಇಬ್ಬರು ಮಹನೀಯರ ಜಯಂತಿಯನ್ನು ಆಚರಿಸಲಾಯಿತು ಎಂದರು.
ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಾ.ವೈ.ಕೆ. ಬಾಲಕೃಷ್ಣ ಮಾತನಾಡಿ, ಶೋಷಿತ ಸಮುದಾಯಗಳ ಪರವಾಗಿ ಅಂಬೇಡ್ಕರ್ ಅವರು ಹೋರಾಟ ಮಾಡಿದರು. ಶೋಷಣೆಗೆ ಒಳಗಾಗಿ ಜೀವನವೇ ಕಷ್ಟ ಎಂಬಂತಹ ಸಂದರ್ಭದಲ್ಲಿ ಶೋಷಿತರಿಗೆ ಧ್ವನಿಯಾಗಿ ನಿಂತ ಮಹಾನ್ ನಾಯಕ ಡಾ.ಬಿ.ಆರ್. ಅಂಬೇಡ್ಕರ್. ಅವರು ನಡೆಸಿದ ಹೋರಾಟದ ಫಲವಾಗಿ ಇಂದು ಅಸಂಖ್ಯಾತ ಶೋಷಿತರು ವಿದ್ಯೆ ಪಡೆಯಲು ಸಾಧ್ಯವಾಗಿದೆ ಎಂದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಸ್ವಯತ್ತ ಸಂಸ್ಥೆ ಪ.ಜಾತಿ, ಪ.ಪಂಗಡ ಸರ್ಕಾರಿ ನೌಕರರ ಸಂಘದ ಬೆಂಗಳೂರು ಅಧ್ಯಕ್ಷ ಎ.ಟಿ. ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ಆರ್. ವೆಂಕಟಪ್ಪ, ಬೆಂಗಳೂರು ಆರೋಗ್ಯ ಸೌಧ ಉಪನಿರ್ದೇಶಕ ಡಾ.ಹೆಚ್.ವಿ.ರಂಗಸ್ವಾಮಿ, ಆಡಳಿತಾಧಿಕಾರಿ ಕೆ.ಎಚ್. ಭೂತರಂಗಪ್ಪ, ಜಿಲ್ಲಾ ಸಂಘದ ಗೌರವಾಧ್ಯಕ್ಷ ಡಾ.ಎಸ್.ರುದ್ರಮೂರ್ತಿ, ರಂಗನಾಥ್ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು, ವೈದ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.