ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಪ್ರಕರಣಸಾರ್ವಜನಿಕ ಆಸ್ತಿಗೆ ಹಾನಿ: ತನಿಖೆಗೆ ಸೂಚನೆ

ಕಲಬುರಗಿ,ಜ.24: ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಘಟನೆ ಖಂಡಿಸಿ ಮಂಗಳವಾರ ನಗರದಲ್ಲಿ ನಡೆದ ಭಾರಿ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿದ ದುಷ್ಕರ್ಮಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇಲ್ಲಿನ ಐವಾನ್-ಎ-ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಾಬಾಸಾಹೇಬರ ಪ್ರತಿಮೆಗೆ ಅಪಮಾನ ಮಾಡಿದ್ದು ಖಂಡನೀಯ ಎಂಬುದು ನಿಜವಾದರೂ, ಭಾವೋದ್ವೇಗಕ್ಕೆ ಒಳಗಾಗಿ ಹೀಗೆಲ್ಲಾ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ಉಂಟು ಮಾಡುವುದು ಸರಿಯಲ್ಲ. ಯಾರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಡಾ.ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೆÇಲೀಸರು ಬಂಧಿಸಿದ್ದಾರೆ. ಇದು ಒಂದು ಆಯಾಮವಾದರೆ, ಈ ಘಟನೆಯನ್ನೇ ನೆಪ ಮಾಡಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದವರನ್ನು ಸಹ ಪತ್ತೆ ಹಚ್ಚಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಿಸಿಟಿವಿ ದೃಶ್ಯಾವಳಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಆಧಾರದ ಮೇಲೆ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಪೆÇಲೀಸರು ಮಾಡುತ್ತಿದ್ದಾರೆ. ಜೊತೆಗೆ, ಅಂಗಡಿಗಳ ಮಾಲೀಕರ ಜೊತೆಗೂ ಮಾತನಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ನುಡಿದರು.
ಪ್ರತಿಮೆಗೆ ಅಪಮಾನ ಜರುಗಿದ ಘಟನೆ ಖಂಡಿಸಿ ಮಂಗಳವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಿರಂತರವಾಗಿ ನಗರದಲ್ಲಿ ದೊಂಬಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಹಾಗೂ ಅಂಗಡಿಗಳಿಗೆ ನುಗ್ಗಿ ಗಲಭೆ ಮಾಡಲಾಗಿದೆ. ಇಷ್ಟಾದರೂ ಪೆÇಲೀಸರು ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್, ಜ.22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿದ್ದ ಪ್ರಯುಕ್ತ ಎಲ್ಲಿಯೂ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಪೆÇಲೀಸ್ ಪಡೆ ನಿಯೋಜಿಸಲಾಗಿತ್ತು. ಇದೇ ಹೊತ್ತಿನಲ್ಲಿ ಪ್ರತಿಮೆಗೆ ಅಪಮಾನ ಮಾಡಿದ ಘಟನೆ ಖಂಡಿಸಿ ವ್ಯಾಪಕ ಸ್ವರೂಪದಲ್ಲಿ ಪ್ರತಿಭಟನೆ ನಡೆದಿದೆ. ಹೀಗಾಗಿ ತಕ್ಷಣ ಪೆÇಲೀಸರು ಸ್ಪಂದಿಸಲು ಸಾಧ್ಯವಾಗಿಲ್ಲ. ಮೇಲಾಗಿ, ಬೆಂಗಳೂರಿನಲ್ಲಿ ಪೆÇಲೀಸ್ ಮಹಾನಿರ್ದೇಶಕರು ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಎಸ್ಪಿ ಮತ್ತು ಪೆÇಲೀಸ್ ಕಮಿಷನರ್ ಬೆಂಗಳೂರಿಗೆ ತೆರಳಿದ್ದರು. ಹಾಗಾಗಿ ಕ್ಷಿಪ್ರ ಸ್ಪಂದನೆ ಸಾಧ್ಯವಾಗದಿದ್ದರೂ, ಸ್ಥಳೀಯ ರಾಜಕೀಯ ನಾಯಕರು ಪ್ರತಿಭಟನಾಕಾರರ ಮನವೊಲಿಸುವ ಕೆಲಸ ಮಾಡಿದ್ದಾರೆ ಎಂದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರತಿಮೆಗೆ ಅಪಮಾನ ಮಾಡಿದವರು ಯಾವುದೇ ಪಕ್ಷಕ್ಕೆ ಸೇರಿದವರಾಗಿದ್ದರೂ ಅವರು ಮನುವಾದಿಗಳು ಎಂಬುದಂತು ಸತ್ಯ. ಅವರು ಅಂಬೇಡ್ಕರ್ ಆಗಿರಲಿ, ಬಸವಣ್ಣ ಆಗಿರಲಿ, ಯಾರಿಗೇ ಅಪಮಾನ ಮಾಡಿದರೂ ಅದರ ಹಿಂದೆ ಮನುವಾದಿಗಳು ಇರುತ್ತಾರೆ ಎಂದರು.ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯಸಿಂಗ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಕಾಂಗ್ರೆಸ್ ಮುಖಂಡ ರಾಜಗೋಪಾಲರೆಡ್ಡಿ ಇದ್ದರು.


ಪ್ರತಿಮೆಗೆ ಅಪಮಾನ: ನಾಲ್ವರು ಅರೆಸ್ಟ್
ಕಲಬುರಗಿ ಹೊರವಲಯದ ಕೋಟನೂರ್(ಡಿ) ಬಳಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಕಲಬುರಗಿ ನಗರ ಪೆÇಲೀಸ್ ಕಮಿಷನರ್ ಚೇತನ್ ಕುಮಾರ್ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಅವರು ಮಾತನಾಡುತ್ತಾ, ಕಿರಣ, ಹನುಮಂತ, ಮಾನು ಹಾಗೂ ಸಂಗಮೇಶ ಬಂಧಿತರು. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದರು.
ಪ್ರತಿಮೆಗೆ ಅಪಮಾನ ಜರುಗಿದ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮೂರು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿ, ಕೇವಲ 14-18 ತಾಸಿನೊಳಗೆ ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆಗುತ್ತಿದ್ದಂತೆಯೇ ಹೆಚ್ಚಿನ ವಿಚಾರಣೆಗಾಗಿ ಮತ್ತೊಮ್ಮೆ ಅವರನ್ನು ಪೆÇಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಾಗುವುದು ಎಂದರು.
ಸರಿಯಾಗಿ ವಿಚಾರಣೆ ಕೈಗೊಳ್ಳದೆ ನಾಲ್ವರನ್ನು ಆರೋಪಿಗಳು ಎಂದು ಫಿಟ್ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೇತನ್, ಘಟನೆಯ ಕುರಿತು ವೈಜ್ಞಾನಿಕ ಆಯಾಮದಲ್ಲಿ ತನಿಖೆ ಕೈಗೊಂಡು ಮಾಹಿತಿ ಕ್ರೋಢೀಕರಿಸಿದ ಬಳಿಕವೇ ನೈಜ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಳ್ಳಲಾಗಿದೆ. ತನಿಖೆಗೆ ಸಹಕರಿಸಿದ ಶ್ವಾನದಳದ ಮೂಸು ನಾಯಿಗಳು ಸಹ ತನಿಖಾಧಿಕಾರಿಗಳ ವಿಚಾರಣೆ ಸಮರ್ಥಿಸುವ ಸುಳಿವು ನೀಡಿವೆ. ಮೇಲಾಗಿ, ವಿಚಾರಣೆ ವೇಳೆ ಆರೋಪಿಗಳು ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಘಟನೆ ನಡೆದ ಸ್ಥಳದಲ್ಲಿ ಕೆಲವರ ಹೆಸರುಗಳನ್ನು ಒಳಗೊಂಡ ಚೀಟಿ ದೊರೆತ ಕುರಿತು ಸ್ಪಷ್ಟನೆ ನೀಡಿದ ಪೆÇಲೀಸ್ ಕಮಿಷನರ್ ಚೇತನ್, ಚೀಟಿಯಲ್ಲಿದ್ದ ಹೆಸರುಗಳ ಕುರಿತು ಪರಿಶೀಲಿಸಿ ವಿಚಾರಣೆ ಕೈಗೊಂಡ ಬಳಿಕ ಅದರಲ್ಲಿರುವ ಹೆಸರುಗಳಿಗೂ ಘಟನೆಗೂ ಸಂಬಂಧವಿಲ್ಲ ಎಂಬುದು ದೃಢಪಟ್ಟಿದೆ. ಬದಲಿಗೆ ಅದೊಂದು ಒಳಸಂಚಿನ ಭಾಗ ಎಂಬುದು ಸ್ಪಷ್ಟವಾಗಿದೆ ಎಂದು ಸಮಜಾಯಿಷಿ ನೀಡಿದರು.