ಅಂಬೇಡ್ಕರ್ ಪುತ್ಥಳಿಗೆ ಅಪಮಾನಿಸಿದ ಕಿಡಿಗೇಡಿಗಳ ಬಂಧನಕ್ಕೆ ಸಚಿವ ಖರ್ಗೆ ಸೂಚನೆ

ಕಲಬುರಗಿ:ಜ.23:ನಗರದ ಹೊರವಲಯದಲ್ಲಿ ಕೋಟನೂರ್(ಡಿ) ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಅವಮಾನ ಮಾಡಿದ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಕೂಡಲೇ ಆರೋಪಿಗಳನ್ನು ಬಂಧಿಸಲು ಸೂಚನೆ ನೀಡಲಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪೋಲಿಸ್ ಮಹಾನಿರ್ದೇಶಕರ ಸಭೆಗಾಗಿ ಆಗಮಿಸಿದ್ದ ನಗರ ಪೋಲಿಸ್ ಆಯುಕ್ತ ಆರ್. ಚೇತನ್ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರಿಗೆ ಜಿಲ್ಲೆಗೆ ಮರಳಿ ಕೂಹಿಸಿ ಪ್ರಕರಣದ ಕುರಿತು ತೀವ್ರಗತಿಯಲ್ಲಿ ತನಿಖೆ ಕೈಗೊಂಡು ಆದಷ್ಟು ಶೀಘ್ರವಾಗಿ ಅಪರಾಧಿಗಳನ್ನು ಬಂಧಿಸುವಂತೆ ಈಗಾಗಲೇ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಸಮಾನತೆಗಾಗಿ ತಮ್ಮ ಜೀವನವನ್ನೇ ಸವೆಸಿ ಇಡೀ ದೇಶದ ಶೋಷಿತ ಸಮುದಾಯಗಳಿಗೆ ಬದುಕುವ ಹಕ್ಕು ಕೊಟ್ಟ ಮಹಾತ್ಮನಿಗೂ ಅವಮಾನ ಮಾಡಿದವರಿಗೆ ತಕ್ಕ ಶಿಕ್ಷೆ ನೀಡುವ ಕೆಲಸವನ್ನು ನಾವು ಖಂಡಿತ ಮಾಡಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯಾರೂ ಕೂಡ ಉದ್ವೇಗಕ್ಕೆ ಒಳಗಾಗದೇ ಸಮಾಜದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿರುವ ಅವರು, ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಶೀಘ್ರ ಆರೋಪಿಗಳ ಬಂಧನ: ನಗರ ಪೋಲಿಸ್ ಆಯುಕ್ತ ಆರ್. ಚೇತನ್ ಅವರು ಹೇಳಿಕೆಯನ್ನು ನೀಡಿ, ನಗರದ ಕೋಟನೂರು ಬಡಾವಣೆಯಲ್ಲಿ ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸದರಿ ಘಟನೆಗೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದಷ್ಟು ಬೇಗನೇ ಪ್ರಕರಣವನ್ನು ತ್ವರಿತಗತಿಯಲ್ಲಿ ತನಿಖೆ ಮಾಡಿ ಅಪರಾಧಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಮಾನತೆಗಾಗಿ ತಮ್ಮ ಜೀವನವನ್ನೇ ಸವೆಸಿ ಇಡೀ ದೇಶದ ಶೋಷಿತ ಸಮುದಾಯಗಳಿಗೆ ಬದುಕುವ ಹಕ್ಕನ್ನು ಕೊಟ್ಟ ಮಹಾತ್ಮನಿಗೂ ಅಪಮಾನ ಮಾಡಿದವರಿಗೆ ತಕ್ಕ ಶಿಕ್ಷೆ ನೀಡುವ ಕೆಲಸವನ್ನು ನಾವು ಖಂಡಿತ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ಉದ್ವೇಗಕ್ಕೆ ಒಳಗಾಗದೇ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ಅವರು ಕೋರಿದ್ದಾರೆ.