ಅಂಬೇಡ್ಕರ್ ತತ್ವಾದರ್ಶ ಅಳವಡಿಸಿಕೊಳ್ಳಲು ಕರೆ

ತಿಪಟೂರು, ನ. ೧೩- ಮನುಕುಲದ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಜೀವನ ಆಧಾರಿತ ಧಾರಾವಾಹಿಯು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು, ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ, ಭೈರಾಪುರ ಗ್ರಾಮದಲ್ಲಿ ಛಲವಾಧಿ ಮಹಾಸಭಾ ವತಿಯಿಂದ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರವನ್ನು ಅನಾವರಣಗೊಳಿಸಿ ಪುಷ್ಪಾರ್ಚನೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಎಲ್ಲರಿಗೂ ಸ್ಪೂರ್ತಿ. ಅವರ ಜೀವನವೇ ಆದರ್ಶ. ಅವರ ಆದರ್ಶ, ಸ್ಪೂರ್ತಿಯ ಗುಣಗಳೇ ಎಲ್ಲರಿಗೂ ಮಾದರಿ. ಆದ್ದರಿಂದಲೇ ನಮ್ಮ ದೇವರ ಕೋಣೆಯಲ್ಲಿ ಅಂತಹ ಮಹಾನಾಯಕರ ಪೋಟೋ ಇಟ್ಟು ಪೂಜಿಸುತ್ತಿದ್ದೇನೆ. ಅವರ ಸಂವಿಧಾನದ ಮೂಲ ಪುರುಷ. ಅವರ ನಡೆ-ನುಡಿಗಳನ್ನು ನಾವುಗಳು ಅನುಸರಿಸಿದರೆ ಮಾನವ ಕುಲವೇ ಸಂತೋಷದಿಂದ ಇರುತ್ತದೆ ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ, ಶೋಷಿತ, ದಲಿತ, ದುರ್ಬಲ ವರ್ಗದ ಸಮಾಜಕ್ಕೆ ಆಶಾಕಿರಣದಂತಿರುವ ಡಾ. ಅಂಬೇಡ್ಕರ್ ರವರನ್ನು ಮುಂದಿನ ತಲೆಮಾರಿಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ಕಾರಣಕ್ಕೆ ಜೀ ಕನ್ನಡ ವಾಹಿನಿಯು ಅವರ ಜೀವನ ಆಧಾರಿತ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. ಈ ಧಾರಾವಾಹಿಯನ್ನು ಎಲ್ಲರೂ ನೋಡಿ ಅವರ ತತ್ವ, ನಿಲುವು ಮತ್ತು ಬದುಕಿನ ಹೋರಾಟಗಳನ್ನು ಕಲಿತು ಸಮಾಜದಲ್ಲಿ ಮುಂದೆ ಬರಬೇಕೆಂದು ಕರೆ ನೀಡಿದರು.
ತಾಲ್ಲೂಕು ಛಲವಾಧಿ ಮಹಾಸಭಾ ಅಧ್ಯಕ್ಷ ಬಜಗೂರು ಮಂಜುನಾಥ್ ಮಾತನಾಡಿ, ಈ ಧಾರಾವಾಹಿ ಕುರಿತು ಚಿತ್ರನಟರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುವುದು ಒಳ್ಳೆಯ ಬೆಳವಣಿಗೆ ಹಾಗೂ ಧಾರಾವಾಹಿಯ ಕನ್ನಡ ಶೀರ್ಷಿಕೆ ಹಾಡಿಗೆ ಸಾಹಿತ್ಯವನ್ನು ರಚಿಸಿರುವ ಹಂಸಲೇಖರವರು ಅಂಬೇಡ್ಕರ್ ರವರಿಗೆ ಸಾಹಿತ್ಯ ಮೂಲಕ ಗೌರವ ನಮನವನ್ನು ಸಲ್ಲಿಸಿರುವುದು ಸಂತೋಷದ ವಿಷಯ. ಹಾಗೂ ಚಿತ್ರ ನಟ ಯಶ್ ವಾಹಿನಿ ಮುಖ್ಯಸ್ಥರಿಗೆ ಪ್ರಸಾರದ ವಿಷಯದಲ್ಲಿ ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ ವಿಚಾರವೆಂದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಆನಂದರವಿ, ಜಯಕನಾಟಕ ಜನಪರ ವೇದಿಕೆಯ ತಾಲ್ಲೂಕು ಅಧ್ಯಕ್ಷ ಬಿ.ಟಿ. ಕುಮಾರ್, ಗ್ರಾಮದ ಹಿರಿಯ ಮುಖಂಡ ಬಸವರಾಜು, ಶಂಕರಪ್ಪ, ಮಲ್ಲಿಕಾರ್ಜುನಯ್ಯ, ಕಾಂತರಾಜ್, ಸುರೇಶ್, ಹಾಗೂ ಪದಾಧಿಕಾರಿಗಳಾದ ರಾಜಣ್ಣ, ಮಹೇಶ್, ಹಿರಿಯಣ್ಣಾಕ್ಷ, ಕಲ್ಲೇಶ್, ಮೋಹನ್‌ಬಾಬು, ಕಿರಣ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.