ಅಂಬೇಡ್ಕರ್ ಜಯಂತಿ. ಮಹಾನಾಯಕ ಬ್ಯಾನರ್ ಗೆ ಹಾಲಿನಾಭಿಷೇಕ.

ಕೂಡ್ಲಿಗಿ.ಏ.16:- ಬಾಬಾ ಸಾಹೇಬರ 130ನೇ ಜಯಂತ್ಯೋತ್ಸವವನ್ನು ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ದಲಿತ ಸಂಘಟನೆಗಳು ಹಾಗೂ ಗ್ರಾಮಸ್ಥರು ಸೇರಿ ಮಹಾನಾಯಕ ಧಾರಾವಾಹಿಯ ಬ್ಯಾನರ್ ಗೆ ಹಾಲಿನಾಭಿಷೇಕ ಮಾಡಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದರು.
ಸುಮಾರು 15ಲೀಟರ್ ಗೂ ಅಧಿಕ ಹಾಲಿನ ಪ್ಯಾಕೆಟ್ ಹಾಗೂ ಕೊಡಗಳಲ್ಲಿ ಹಾಲನ್ನು ಹಾಕಿಕೊಂಡು ಮಹಾನಾಯಕ ಬ್ಯಾನರ್ ಗೆ ಹಾಲಿನಾಭಿಷೇಕ ಮಾಡಿ ಜಯಂತಿಗೆ ಚಾಲನೆ ನೀಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಚಂದ್ರಮ್ಮ ದುರುಗಪ್ಪ ಮಾತನಾಡಿ ಪ್ರತಿಯೊಬ್ಬರೂ ಸಮಾಜದಲ್ಲಿ ಸಮಾನರು ಎಂದು ತೋರಿಸಿಕೊಟ್ಟು ಮಹಿಳೆಯರಿಗೂ ಸಂವಿಧಾನದ ಮೂಲಕ ಮೀಸಲಾತಿ ಕಲ್ಪಿಸಿ ರಾಜಕೀಯ ರಂಗದಲ್ಲಿ ಮೆರೆಯುವಂತೆ ಮಾಡಿದ ಮಹಾನ್ ಚೇತನ ಬಾಬಾ ಸಾಹೇಬ್ ಅಂಬೇಡ್ಕರರು ಎಂದು ತಿಳಿಸಿದರು.
ಗ್ರಾಮಪಂಚಾಯಿತಿ ಮಾಜಿ ಸದಸ್ಯೆ ಶಿಲ್ಪ ಚೌಡೇಶ ಮಾತನಾಡಿ ಜಾತಿವ್ಯವಸ್ಥೆಯಲ್ಲಿ ತಾವು ಕಂಡುಂಡ ಸತ್ಯ ಘಟನೆ ಅರಿತು ದಲಿತರಿಗೆ ಶಿಕ್ಷಣ ಸಂಘಟನೆ ಹೋರಾಟದ ಹಾದಿ ಹೇಳಿಕೊಟ್ಟ ಅಂಬೇಡ್ಕರ್ ಶಿಕ್ಷಣದಿಂದ ದಲಿತರ ಉದ್ದಾರ ಸಾಧ್ಯ ಎಂದು ದಲಿತರಿಗೆ ಮೀಸಲಾತಿ ಕಲ್ಪಿಸಿ ದಲಿತರ ಏಳ್ಗೆಗೆ ಶ್ರಮಿಸಿದ ಮಹಾನ್ ಚೇತನ ಅಂಬೇಡ್ಕರ್ ರು ಎಂದು ತಿಳಿಸಿ ಇಂದು ಸಮಾಜದಲ್ಲಿ ಸರ್ವರಲ್ಲಿ ದಲಿತರು ಸಮನಾಗಿ ಬದುಕಲು ಹಾದಿ ತೋರಿಸಿದ ಸಮಾಜ ಸುಧಾರಕ ಮಹಾನಾಯಕರವರು ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕ ಚೌಡೇಶ, ಖಜಾಂಚಿ ಗುರುಸಿದ್ದಪ್ಪ, ಗ್ರಾಮಪಂಚಾಯಿತಿ ಸದಸ್ಯರಾದ ವೀರಣ್ಣ, ಪ್ರಶಾಂತಗೌಡ, ಗುತ್ತಿಗೆದಾರ ನಾಗರಾಜ, ವಿರುಪಾಕ್ಷಿ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಲಿಂಗನಗೌಡ್ರು, ಗ್ರಾಮದ ದಲಿತ ಮುಖಂಡರು, ಸಂಘಟನೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.