
ದಾವಣಗೆರೆ.ಮಾ.೩೧: ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಅಂಬೇಡ್ಕರ್ ಜಯಂತಿಯನ್ನು ನಿರ್ಲಕ್ಷಿಸದೆ, ಏ.೧೪ ರಂದು ಅಂಬೇಡ್ಕರ್ ಜಯಂತಿಯನ್ನು ಸರ್ಕಾರಿ ಕಚೇರಿಗಳಲ್ಲಿ ಸರ್ಕಾರಿ ಗೌರವದೊಂದಿಗೆ ಕಡ್ಡಾಯವಾಗಿ ಆಚರಿಸಬೇಕು ಎಂದು ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಆರ್. ಸೂರ್ಯಪ್ರಕಾಶ್ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು, ಜಿಲ್ಲಾ ವರಿಷ್ಠಾಧಿಕಾರಿಗಳು, ಶೈಕ್ಷಣಿಕ. ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಸಂಬಂಧ ಮನವಿ ಮಾಡುವುದಾಗಿ ತಿಳಿಸಿದರು.ಏ.೧೪ ರಂದು ದೇಶದಲ್ಲಿ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ಕೈಗಾರಿಕಾ ಸಂಸ್ಥೆಗಳಿಗೆ ರಜೆ ಘೋಷಿಸಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಬಾರದಿರುವುದು ಕಂಡು ಬಂದಿದೆ. ಶಾಲಾ ಕಾಲೇಜುಗಳಲ್ಲೂ ಸಹ ಮಕ್ಕಳು ಬರುವುದಿಲ್ಲ. ಹಾಗಾಗಿ ಎಲ್ಲರೂ ಸೇರಿ ಕಡ್ಡಾಯವಾಗಿ ಅಂಬೇಡ್ಕರ್ ಜಯಂತಿ ಆಚರಿಸುವಂತೆ ಸಂಬಂಧಪಟ್ಟವರಿಗೆ ತಾಕೀತು ಮಾಡಬೇಕು ಎಂದು ಒತ್ತಾಯಿಸಿದರು.ಜಯಂತಿ ಆಚರಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಲ್ಲಿ ಜಯಂತಿ ಕುರಿತು ಮಾಹಿತಿ ನೀಡಬೇಕು ಎಂದರು. ನಮ್ಮ ಸಂಘಟನೆಯಿಂದ ಅಂದು ಬೆಳಿಗ್ಗೆ ೮ ಗಂಟೆಗೆ ನಗರದ ಗಾಂಧೀ ವೃತ್ತದಿಂದ , ಟಿ.ಬಿ. ರಸ್ತೆ, ಎವಿಕೆ ಕಾಲೇಜು ರಸ್ತೆ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಶಾಲಾ ವಿದ್ಯಾರ್ಥಿಗಳು, ಹೆಣ್ಣು ಮಕ್ಕಳು, ಮಂಗಳಮುಖಿಯರು, ಸಂಘಟನಾ ನಾಯಕರುಗಳು, ಸೇರಿ ಪಥಸಂಚಲನ ನಡೆಸಲಿದ್ದೇವೆ. ೯.೩೦ ಕ್ಕೆ ಅಂಬೇಡ್ಕರ್ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿ, ಮಾಲಾರ್ಪಣೆ ಮಾಡಲಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜ್ಯೋತಿ ಮಂಜುನಾಥ್, ಎನ್. ಸಂತೋಷ್, ಬಿ. ಮಂಜುನಾಥ್, ಕೆ. ರಾಘವೇಂದ್ರ ಹಾಗೂ ಕೆ. ಗಣೇಶ್ ಉಪಸ್ಥಿತರಿದ್ದರು.