ಅಂಬೇಡ್ಕರ್ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಮುಳಬಾಗಿಲು.ಏ೧೬: ತಾಲೂಕು ಆಡಳಿತದ ವತಿಯಿಂದ ಬುಧವಾರ ಆಯೋಜಿಸಿದ್ದ ಸಂವಿದಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೦ ನೇ ಜಯಂತೋತ್ಸವ ಕಾರ್ಯಕ್ರಮಕ್ಕೆ ಹಲವಾರು ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದು ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಬಹುಜನ ಚಳುವಳಿ ದಲಿತ ಸಂಘರ್ಷ ಸಮಿತಿ ಸಂಯೋಜಿ ಮುಖಂಡರು ತಹಶೀಲ್ದಾರ್ ಕೆ.ಎನ್.ರಾಜಶೇಖರ್ ರವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಮನವಿ ಸಲ್ಲಿಸಿದ ಮುಖಂಡರು ತಾಲೂಕಿನ ೨೮ ಇಲಾಖೆಗಳ ಪೈಕಿ ಕೇವಲ ೬ ಇಲಾಖೆ ಅಧಿಕಾರಿಗಳು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ, ಜಯಂತಿ ಕಾರ್ಯಕ್ರಮದ ಪೂವಭಾವಿ ಸಭೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂದು ಸೂಚಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ, ಅವರನ್ನು ಅಮಾನತ್ತು ಮಾಡಬೇಕು, ಕೆಲವೊಂದು ಇಲಾಖೆಗಳಲ್ಲಿ ಅಂಬೇಡ್ಕರ್ ಜಯಂತಿ ಪೂಜಾ ಕಾರ್ಯಕ್ರಮವೂ ಮಾಡಿಲ್ಲ ಅಲ್ಲಿನ ಸಿಬ್ಬಂದಿಯೇ ಜಯಂತಿಯನ್ನು ಮಾಡಿದ್ದಾರೆ, ರೇಷ್ಮೆ, ಮೀನುಗಾರಿಕೆ, ತೋಟಗಾರಿಕೆ, ಕೃಷಿ ಮತ್ತು ಕೈಗಾರಿಕೆ, ಕಾರ್ಮಿಕ, ಡಿ.ವೈ.ಎಸ್.ಪಿ ಕಚೇರಿಗಳಲ್ಲಿ ಯಾವುದೇ ರೀತಿ ವಿದ್ಯುತ್ ದೀಪಾಲಂಕಾರಗಳು ಮಾಡಿಲ್ಲ ಎಂದು ಮನವಿ ಸಲ್ಲಿಸಿದರು.
ಸಂಘಟನೆಯ ಸ್ಥಾಪಕ ಅಧ್ಯಕ್ಷ ಸಂಗಸಂದ್ರ ವಿಜಯಕುಮಾರ್, ತಾಲೂಕು ಅಧ್ಯಕ್ಷ ಕುರುಬರಹಳ್ಳಿ ವೆಂಕಟಾಚಲಪತಿ, ಕಾರ್ಯದರ್ಶಿ ಕಪ್ಪಲಮಡಗು ಶಂಕರ್, ಮುಖಂಡರಾದ ಬಿ.ವಿ.ವೆಂಕಟರಾಮ್, ಕಸಿವಿರೆಡ್ಡಿಹಳ್ಳಿ ರಮೇಶ್, ಹೊಸಹಳ್ಳಿ ರಮೇಶ್, ಕೋಡಿಹಳ್ಳಿ ಶ್ರೀನಿವಾಸ್, ಗಂಗಾಧರ್, ಸೋಮು ಮತ್ತಿತರರು ಇದ್ದರು.