ಅಂಬೇಡ್ಕರ್ ಕೊಡುಗೆ ಅನನ್ಯ

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್‌ರವರ ೧೩೨ನೇ ಜಯಂತಿಯನ್ನು ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ರಾಕೇಶ್ ಸಿಂಗ್‌ರವರು ಪೌರಕಾರ್ಮಿಕರಿಗೆ ಸಿಹಿ ವಿತರಣೆ ಮಾಡಿದರು. ವಿಶೇಷ ಆಯುಕ್ತರಾದ ಪಿ.ಎನ್. ರವೀಂದ್ರ, ಡಾ. ಹರೀಶ್ ಕುಮಾರ್, ಪ್ರೀತಿ ಗೆಹ್ಲೋಟ್,
ಉಪ ಆಯುಕ್ತ ಮಂಜುನಾಥ ಸ್ವಾಮಿ ಇದ್ದಾರೆ.

ಬೆಂಗಳೂರು, ಏ.೧೪-ದೇಶಕ್ಕೆ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅನನ್ಯವಾಗಿದ್ದು, ಭವಿಷ್ಯದ ಪ್ರಜೆಗಳಾದ ಮಕ್ಕಳಲ್ಲಿ ಅಂಬೇಡ್ಕರರ ಆದರ್ಶ ಮತ್ತು ತತ್ವಗಳನ್ನು ಬಿತ್ತಬೇಕಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕರೆ ನೀಡಿದರು. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಆಚರಣೆ ಹಿನ್ನೆಲೆ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.
ಇಂದಿಗೂ ಇವರು ರಚಿಸಿದ ಸಂವಿಧಾನದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿದ್ದು, ದೇಶದ ಸಾರ್ವಭೌಮತ್ವವನ್ನು ಕಾಪಾಡುತ್ತಿದೆ. ಮುಖ್ಯವಾಗಿ ಅವರು ನೀಡಿದ ಮೂಲಭೂತ ಹಕ್ಕುಗಳುಹಾಗೂ ಕರ್ತವ್ಯಗಳನ್ನು ಪಾಲಿಸುವುದರಿಂದ ದೇಶದಲ್ಲಿ ಶಾಂತಿ ನೆಲಸಲಿದೆ ಎಂದು ಅಭಿಪ್ರಾಯಪಟ್ಟರು. ಅಂಬೇಡ್ಕರ್ ಅವರ ಕುರಿತು ಭಾಷಣ ಮಾಡುವ ಬದಲು ಅವರು ಈ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ನೆನದು ಪಾಲನೆ ಮಾಡಬೇಕಾಗಿದೆ. ಜತೆಗೆ, ಆತ್ಮಲೋಕನವೂ ಅಗತ್ಯವಿದೆ ಎಂದ ಅವರು, ದೇಶ ಇಂದುಪ್ರಜಾಪ್ರಭುತ್ವದ ತಳ ಹದಿಯ ಮೇಲೆ ನಿಂತಿದ್ದು, ಸಾಕಷ್ಟು ಅಭಿ ವೃದ್ಧಿಯಾಗಿದೆ ಎಂದು ನುಡಿದರು.
ಕಾನೂನು ಎಂಬುದು ಬಡವ ಬಲ್ಲಿದನಿಗೂ ಸಮಾನವಾಗಿದ್ದು, ಸಂವಿಧಾನ ಎಲ್ಲರ ರಕ್ಷಣೆ ಮಾಡುತ್ತಿದೆ. ಸದೃಢ ದೇಶದಲ್ಲಿನ ಕಾನೂನು ಎಷ್ಟರಮಟ್ಟಿಗೆ ಕಾರಣವಾಗುತ್ತದೆ ಎಂಬ ಪರಿಕಲ್ಪನೆಯನ್ನು ಹಿಂದೆಯೇ ಹಾಕಿ ಕೊಟ್ಟ ಮಹಾಜ್ಞಾನಿ ಅಂಬೇಡ್ಕರ್ ಎಂದರು. ಈ ಸಂದರ್ಭದಲ್ಲಿ ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್, ವಿಶೇಷ ಆಯುಕ್ತರಾದ ಪಿ.ಎನ್. ರವೀಂದ್ರ, ಡಾ.ಹರೀಶ್ ಕುಮಾರ್, ಪ್ರೀತಿ ಗೆಹ್ಲೋಟ್, ಉಪ ಆಯುಕ್ತ ಮಂಜುನಾಥ ಸ್ವಾಮಿ ಸೇರಿದಂತೆ ಪ್ರಮುಖರಿದ್ದರು.