ಅಂಬೇಡ್ಕರ್ ಕಾಲನಿಗೆ ಸಚಿವ ಕೋಟ ಭೇಟಿ

ಕುಂದಾಪುರ, ನ.೩- ಕುಂದಾಪುರ ಪುರಸಭಾ ವ್ಯಾಪ್ತಿಯ ಅಂಬೇಡ್ಕರ್ ಕಾಲನಿಗೆ ನಿನ್ನೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಪೂರ್ಣವಾಗಿರುವ ಪರಿಶಿಷ್ಟ ಪಂಗಡದ ಕುಟುಂಬಗಳ ಮನೆಗಳನ್ನು ಪರಿಶೀಲಿಸಿದರು.
ಬಳಿಕ ಮಾತನಾಡಿದ ಸಚಿವರು, ಕಾಲನಿಯ ಪರಿಶಿಷ್ಟ ಪಂಗಡ ಕುಟುಂಬಗಳ ಮೂರು ನಾಲ್ಕು ಮನೆಗಳು ಪೂರ್ಣಗೊಂಡಿದ್ದು, ೧೫ ಮನೆಗಳ ಕಾಮಗಾರಿ ಇನ್ನು ಪೂರ್ಣಗೊಳ್ಳಬೇಕಿದೆ. ಪೂರ್ಣಗೊಂಡ ಮನೆಗಳ ನಿರ್ಮಾಣದ ಕೊನೆಯ ಕಂತು ಬರಬೇಕಾಗಿದೆ. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ, ವಸತಿ ಇಲಾಖೆಯೊಂದಿಗೆ ಮಾತನಾಡಿದ್ದು, ೧೫ ದಿನಗಳಲ್ಲಿ ಖಾತೆಗೆ ಹಣ ವರ್ಗಾಯಿಸುವ ಕೆಲಸ ಮಾಡಲಾಗುವುದು. ಇನ್ನು ಬಾಕಿ ಉಳಿದ ೯ರಿಂದ ೧೦ ಮನೆಗಳಿಗೆ ಯಾವುದಾದರೂ ಮೂಲ ದಿಂದ ಪ್ರಥಮ ಕಂತು ನೀಡಲು ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಮನೆಗಳು ಪೂರ್ಣಗೊಂಡ ಬಳಿಕ ಅವರ ಖಾತೆಗೆ ಹಣ ಬರಲಿದೆ. ನಿಯಮ ದನ್ವಯ ಫಲಾನುಭವಿಗಳೆ ಮನೆ ನಿರ್ಮಾಣ ಮಾಡಬೇಕು. ಹೊರಗುತ್ತಿಗೆಗೆ ಅವಕಾಶ ಇಲ್ಲ. ಹೊರಗುತ್ತಿಗೆ ಕೊಟ್ಟರೂ ಗುಣಮಟ್ಟದ ಕೆಲಸ ಮಾಡಲಾಗುತ್ತದೆ ಎಂಬ ನಂಬಿಕೆ ಫಲಾನುಭವಿಗಳಲ್ಲಿ ಇರುವುದಿಲ್ಲ. ಆ ಕಾರಣಕ್ಕಾಗಿ ಮೂರೂವರೆ ಲಕ್ಷದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಕೆಲವೆಡೆ ಗೋಡೆ, ಅಡಿಪಾಯ ಹಾಕಿದ ಮನೆಗಳಿಗೆ ಹಣ ಪಾವತಿ ಮಾಡಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಕೆಲಸ ಮಾಡಲು ಫಲಾನುಭವಿಗಳ ಬಳಿ ಹಣ ಇರುವುದಿಲ್ಲ. ಆ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಎರಡು ಮೂರು ಮನೆಗಳನ್ನು ತೆಗೆದುಕೊಳ್ಳಲು ಹೇಳಲಾಗಿದೆ. ೬ ತಿಂಗಳಲ್ಲಿ ಈ ಕೆಲಸ ಪೂರ್ಣ ಗೊಳ್ಳಲಿದೆ ಎಂದು ಅವರು ಹೇಳಿದರು. ಆರು ಮನೆಗಳ ಹಕ್ಕು ಪತ್ರ ಮಂಜೂರು ಮಾಡುವ ಕೆಲಸ ಮಾಡಲಿದ್ದೇವೆ. ಈ ಭಾಗದಲ್ಲಿರುವ ಚರಂಡಿ ವಿಸ್ತರಿಸಲು ಮನವಿ ಮಾಡಿಕೊಂಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇನ್ನು ಸಾಂಪ್ರದಾಯಿಕ ಕಂಬಳಕ್ಕೆ ಕ್ರೀಡಾ ಇಲಾಖೆ ೧ ಲಕ್ಷ ಕೊಡುತ್ತಿದ್ದು, ಈ ಬಾರಿಯೂ ಮುಂದುವರೆಯಬಹುದು ಎಂದು ಅವರು ತಿಳಿಸಿದರು.