ಅಂಬೇಡ್ಕರ್ ಆಶಯಗಳು ಈಡೇರಲು ಶ್ರಮಿಸೋಣ

ಗೌರಿಬಿದನೂರು.ಡಿ೮:ವಿಶ್ವ ಜ್ಞಾನಿ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವಿಚಾರ ಧಾರೆಗಳನ್ನು ಇಂದಿನ ಯುವ ಪೀಳಿಗೆ ಅರಿಯುವ ಜತೆಗೆ ಸಂವಿಧಾನ ಅಧ್ಯಯನ ಮಾಡಿದಲ್ಲಿ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಮುತ್ತುರಾಜ್ ತಿಳಿಸಿದರು.
ತಾಲ್ಲೂಕಿನ ಮಂಚೇನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ದಲಿತ ಸಿಂಹ ಘರ್ಜನೆ ಹಾಗೂ ದಲಿತ ಸೇನೆ ಸಂಘಟನೆಗಳಿಂದ ಆಯೋಜನೆ ಮಾಡಿದ್ದ ’ಅಂಬೇಡ್ಕರ್ ಪರಿನಿರ್ವಾಣ ದಿನ’ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಒಂದು ಜಾತಿಗೆ ಸೀಮಿತವಾಗದೆ ಅವರು ಇಡೀ ಮನುಕುಲಕ್ಕೆ ಸಂದೇಶ ಸಾರಿದ ಮಹಾನ ಚೇತನ. ದೀನ ದಲಿತರ, ಶೋಷಿತರ ಏಳಿಗೆಗೆ ಅವರ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರ ಆದರ್ಶಗಳು ನಮಗೆ ದಾರಿದೀಪವಾಗಬೇಕಾಗಿದೆ ಎಂದು ಹೇಳಿದರು. ದಲಿತ ಸಿಂಹ ಘರ್ಜನೆ ಸಂಘಟನೆಯ ರಾಜ್ಯ ಸಹ ಕಾರ್ಯದರ್ಶಿ ವಿ.ಎನ್.ಕೃಷ್ಣಮೂರ್ತಿ ಮಾತನಾಡಿ, ಈ ದೇಶದ ಜನತೆಗೆ ಸ್ವಾತಂತ್ರ್ಯ, ಸಮಾನತೆ, ಸೋದರತ್ವಯ ಆಧಾರದ ಮೇಲೆ ಶೋಷಿತ ಸಮುದಾಯಗಳ ಪರ ಸತತವಾಗಿ ಹೋರಾಡಿದ ಮಹಾನ್ ನಾಯಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನದ ಉದ್ದಗಲಕ್ಕೂ ಸಂಕಷ್ಟಗಳು ಮತ್ತು ಅವಮಾನಗಳನ್ನು ಎದುರಿಸಿದರೂ ಕೂಡ ತಮ್ಮ ಸಮುದಾಯಕ್ಕೆ ನ್ಯಾಯ ಸೀಗಬೇಕೆಂದು ತಮ್ಮ ಜೀವನವನ್ನು ತ್ಯಾಗ ಮಾಡಿದ ಮಹಾನ ಸಂತ ಎಂದು ಹೇಳಿದರು.
ಇದೇ ವೇಳೆ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಸಿ.ವಿಜಯ್, ಮುಖಂಡರಾದ ನರಸಿಂಹಮೂರ್ತಿ, ತಿಮ್ಮರಾಜು, ಮುಕ್ತಿಯಾರ್, ಪಿಲಿಪ್ಸ್, ಆನಂದ, ಗಂಗಾಧರ್ ನರಸಿಂಹಮೂರ್ತಿ ಹಾಜರಿದ್ದರು.