ಅಂಬೇಡ್ಕರ್ ಆದರ್ಶ ಎಲ್ಲರೂ ಪಾಲಿಸಬೇಕು

ಚನ್ನಗಿರಿ.ಏ.೧೭:  ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಅಹಿಂಸಾತ್ಮಕ ಹೋರಾಟದಿಂದ ಸಾಧನೆ ಮಾಡಿದ ಮಹಾನಾಯಕರು ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜು ವಿ ಶಿವಗಂಗಾ ರವರು ತಿಳಿಸಿದರು. ತಾಲ್ಲೂಕಿನ ಚಿಕ್ಕೂಲಿಕೆರೆ ಗ್ರಾಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿ ಹಿನ್ನೆಲೆ ಬಾಬು ಜಗಜೀವನರಾಂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಅಜ್ಜಿಹಳ್ಳಿ ಗ್ರಾಮ ಪಂಚಾಯ್ತಿ, ಅಂಗನವಾಡಿ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ರಕ್ತದಾನ ಶಿಬಿರದಲ್ಲಿ ಭಾಗಿವಹಿಸಿದ್ದ ಅವರು ಸಮಾನತೆಗಾಗಿ ಶೋಷಿತರ ಪರವಾಗಿ ಅಂಬೇಡ್ಕರ್ ರವರು ಅಹಿಂಸಾತ್ಮಕವಾಗಿ ಹೋರಾಟ ಮಾಡಿದಂತವರು ಎಂದರು.  ಕೇವಲ ಏಪ್ರಿಲ್ 14 ರಂದು ಮಾತ್ರ ಇಂಥ ಮಹಾನ್ ವ್ಯಕ್ತಿಯನ್ನ ಸ್ಮರಿಸುವಂತದ್ದಲ್ಲ  ಪ್ರತಿ ನಿತ್ಯವೂ ಅಂಬೇಡ್ಕರ್ ಅವರನ್ನ ಪ್ರತಿಯೊಬ್ಬ ಭಾರತೀಯ ಸ್ಮರಿಸಲೇಬೇಕು ಎಂದು ಶಿವಗಂಗಾ ಬಸವರಾಜು ತಿಳಿಸಿದರು. ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವ ತತ್ವಗಳ ಆಧಾರದ ಮೇಲೆ ಶೋಷಿತ ಸಮುದಾಯಗಳ ಪರವಾಗಿ ಸತತವಾಗಿ ಹೋರಾಡಿದವರು ಅಂಬೇಡ್ಕರ್ ಅವರು, ಆ ಹೋರಾಟದ ಪ್ರತಿಫಲವಾಗಿ ಇಂದು ನಾವೆಲ್ಲಾ ಸಹೋದರತೆಯಿಂದ ಬಾಳುತ್ತೇವೆ, ಅಸ್ಪರ್ಶತೆಯ ಅಂಧಾಕಾರದಿಂದ ಹೊರಗಡೆ ಬಂದಿದ್ದೇವೆ.ಅಂಬೇಡ್ಕರ್ ಮಹಾನ್ ಜ್ಞಾನಿ,ಸಮಾನತೆ, ಸಹೋದರತೆ ಹೋರಾಟಗಾರರು, ಶೋಷಿತರ ಪರವಾಗಿ ನಿಂತ ಮಹಾನ ನಾಯಕರಾದ  ಕಾರಣ ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ ಬೇಕೆಂದು ಸಂವಿಧಾನ ರಚನೆ ಮಾಡುವ ಮೂಲಕ ವಿಶ್ವ ಕಂಡ ಅಸಮಾನ್ಯ ವ್ಯಕ್ತಿಯಾದರು. ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಅವರ ತಂದೆ ರಾಮ್ ಜಿ ಸಕ್ಪಲ್ ಅವರ ಕಷ್ಟದ ಹಾದಿಗಳೇ ಇಂದು ಸಮಾನತೆ, ಸ್ವಾತಂತ್ರ್ಯ ಸಿಗಲು ಕಾರಣ ನಾವೆಲ್ಲರೂ ಡಾ. ಬಿ. ಆರ್ ಅಂಬೇಡ್ಕರ್ ಅವರ ಆದರ್ಶಗಳನ್ನ ಪರಿಪಾಲಿಸಬೇಕು, ಹೋರಾಟದ ಹಾದಿಯಲ್ಲಿ ನಡೆಯಬೇಕಾಗಿದೆ ಎಂದು  ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀಮತಿ  ಅನುಷಾ ಪ್ರಶಾಂತ್, ಗ್ರಾಮಸ್ಥರಾದ ಶಿವಲಿಂಗಪ್ಪ, ನಾಗೇಂದ್ರಪ್ಪ, ಇಟ್ಟಗಿ ತಿಮ್ಮಯ್ಯ, ಮಹೇಶ್, ಲಿಂಗಾರಾಜು ಹಾಗೂ ತಾಲ್ಲೂಕ್ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಗೌಡ್ರು ಭರತ್ ಪಾಟೀಲ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.