
ಬೆಂಗಳೂರು,ಮೇ.೧೩:ರೆಬೆಲ್ ಸ್ಟಾರ್ ಅಂಬರೀಶ್ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ ‘ಅಂತ’ (ಂಟಿಣhಚಿ) ಸಿನಿಮಾವನ್ನು ಅವರ ಹುಟ್ಟು ಹಬ್ಬದ ದಿನದಂದು ಮರು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅತ್ಯುತ್ತಮ ತಂತ್ರಜ್ಞಾನದ ಮೂಲಕ ಚಿತ್ರಕ್ಕೆ ಮತ್ತಷ್ಟು ಮೆರಗು ತುಂಬಿದ್ದು, ಹಲವು ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.ಮೇ ೨೯ ಅಂಬರೀಶ್ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬದ ಉಡುಗೊರೆ ಎನ್ನುವಂತೆ ಚಿತ್ರವನ್ನು ರಿಲೀಸ್ ಮಾಡುತ್ತಿರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ ಮೊದಲ ಬಾರಿಗೆ ಬಿಡುಗಡೆ ಆಗಿದ್ದು ೧೯೮೧ರಲ್ಲಿ, ಇದೀಗ ಅದೇ ಚಿತ್ರವನ್ನು ಕಲರ್ ಸ್ಕೋಪ್ ಮಾಡಿ, ೫.೧ ಸೌಂಡ್ ವ್ಯವಸ್ಥೆಯನ್ನು ಅಳವಡಿಸಿ ಮತ್ತೆ ಬಿಡುಗಡೆ ಮಾಡಲಾಗುತ್ತಿದೆ.ಎಚ್.ಕೆ ಅನಂತ್ ರಾವ್ ಅವರ ಸರಣಿಯ ಕಥೆಗಳನ್ನು ಆಧರಿಸಿ ತಯಾರಾದ ಈ ಚಿತ್ರಕ್ಕೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶಕರು. ಆರಂಭದಲ್ಲಿ ಈ ಸಿನಿಮಾ ನಿರ್ಮಾಣಕ್ಕೆ ಯಾರೂ ಮನಸ್ಸು ಮಾಡಲಿಲ್ಲ. ಕೊನೆಗೆ ಕೈ ಹಿಡಿದದ್ದು ಎಚ್.ಎನ್. ಮಾರುತಿ ಹಾಗೂ ವೇಣು ಗೋಪಾಲ್. ಸೆನ್ಸಾರ್ ಮಂಡಳಿಯ ವಿಪರೀತ ತೊಂದರೆ ನಡುವೆಯೂ ಸಿನಿಮಾ ರಿಲೀಸ್ ಆಗಿತ್ತು.