ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಲಚ್ಚಪ್ಪ ಜಮಾದಾರ್ ನೇಮಕಕ್ಕೆ ಒತ್ತಾಯ

ಕಲಬುರಗಿ:ಮೇ.23: ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜನವಿರೋಧಿ ನೀತಿಯ ವಿರುದ್ಧ ಜನಾಂದೋಲನ ರೂಪಿಸಿದ್ದರಿಂದ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಆ ಹಿನ್ನೆಲೆಯಲ್ಲಿ ಕೋಲಿ ಕಬ್ಬಲಿಗ ಎಸ್‍ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ್ ಅವರನ್ನು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಇಲ್ಲವೇ ಯಾವುದಾದರೂ ಒಂದು ನಿಗಮ ಮಂಡಳಿಗೆ ನೇಮಕ ಮಾಡಬೇಕು ಎಂದು ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ರಾಮಲಿಂಗ್ ಎಸ್. ನಾಟಿಕಾರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಟ್ಟ ಭರವಸೆಯಂತೆ ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವಲ್ಲಿ ವಿಫಲವಾದ ಬಿಜೆಪಿಯನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲು ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಮೋಸ ಮಾಡಿದ ಬಿಜೆಪಿಗೆ ಕೋಲಿ ಸಮಾಜದವರು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಇದು ಲಚ್ಚಪ್ಪ ಜಮಾದಾರ್ ಅವರ ಹೋರಾಟದ ಪ್ರತಿಫಲವಾಗಿದೆ ಎಂದರು.
ಬಿಜೆಪಿಯು ಕೊಟ್ಟ ಭರವಸೆಯನ್ನು ಈಡೇರಿಸಲು ಮತ್ತೆ ಒತ್ತಡ ಹಾಗೂ ಹೋರಾಟವನ್ನು ಮುಂದುವರೆಸಿರುವ ಲಚ್ಚಪ್ಪ ಜಮಾದಾರ್ ಅವರು ಮುಂಬರುವ ಲೋಕಸಭಾ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿಯೂ ಸಹ ಬಿಜೆಪಿ ಹಠಾವೋ, ಕೋಲಿ ಸಮಾಜ್ ಬಚಾವೋ ಅಭಿಯಾನ ಕರ್ನಾಟಕ ರಾಜ್ಯಾದ್ಯಂತ ಮುಂದುವರೆಯಲಿದೆ ಎಂಬ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ. ಅಂತಹ ಪ್ರಬಲ ಹೋರಾಟಗಾರನಿಗೆ ರಾಜ್ಯ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಸರ್ಕಾರವು ಕೊಟ್ಟ ಭರವಸೆಯಂತೆ ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸಲಿಲ್ಲ. ಇದರಿಂದಾಗಿ ಕೋಲಿ ಸಮಾಜವು ಮೋಸ ಮಾಡಿದ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸುವ ತೀರ್ಮಾನ ತೆಗೆದುಕೊಂಡಿತು. ಅದರಂತೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಸಮಾಜವು ತಕ್ಕ ಪಾಠ ಕಲಿಸಿದೆ ಎಂದು ಅವರು ಹೇಳಿದರು.
ವಿಧಾನಸಭಾ ಉಪ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸೇರಿದಂತೆ ಬಹುತೇಕ ಸಚಿವರು ಹಾಗೂ ಬಿಜೆಪಿಯ ನಾಯಕರು ಕೋಲಿ ಸಮಾಜದ ಪರ್ಯಾಯ ಪದಗಳನ್ನು ಎಸ್‍ಟಿಗೆ ಸೇರಿಸುವುದಾಗಿ ಭರವಸೆ ನೀಡಿದ್ದರು. ವಿಶೇಷವಾಗಿ ಸಂಸದ ಡಾ. ಉಮೇಶ್ ಜಾಧವ್ ಅವರು ಕೋಲಿ ಸಮಾಜವನ್ನು ಎಸ್‍ಟಿಗೆ ಸೇರಿಸುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಘೋಷಿಸಿದ್ದರು. ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಇದ್ದುದರಿಂದ ಲಚ್ಚಪ್ಪ ಜಮಾದಾರ್ ಅವರು ಬಿಜೆಪಿ ಹಠಾವೋ ಕೋಲಿ ಸಮಾಜ್ ಬಚಾವೋ ಚಳುವಳಿಯನ್ನು ಆರಂಭಿಸಿದ್ದಾರೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವು ಧಣ್ಣಿ, ಹಣಮಂತ್ ಸಂಕನೂರ್, ಅಂಬಾರಾಯ್ ಜವಳಗಿ, ರಾಮಲಿಂಗ್ ಬಾನರ್, ಶಿವರಾಜ್ ಹುಣಚಗೇರಿ, ಗುರು ಕರಾಟೆ, ಪಿಂಟು ಜಮಾದಾರ್, ನಾಗಿಂದ್ರಪ್ಪ ಲಿಂಗಮಪಲ್ಲಿ, ದೇವಿಂದ್ರ ಜಮಾದಾರ್ ಮುಂತಾದವರು ಉಪಸ್ಥಿತರಿದ್ದರು.