ಅಂಬಿಗರ ಚೌಡಯ್ಯನವರ ಸಾಮಾಜಿಕ ಕೊಡುಗೆ ಅನನ್ಯ

ಕಲಬುರಗಿ:ಜ.21: ನಿಜಶರಣ ಅಂಬಿಗರ ಚೌಡಯ್ಯನವರು ವಿಶ್ವಗುರು ಬಸವಣ್ಣನವರ ಜೊತೆಗೂಡಿ ಸಾಮಾಜಿಕ ನ್ಯಾಯಕ್ಕಾಗಿ, ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ, ಅನ್ಯಾಯದ ವಿರುದ್ದ ಇಡೀ ತಮ್ಮ ಜೀವನದುದ್ದಕ್ಕೂ ಹೋರಾಟ ಮಾಡಿದ್ದಾರೆ. ವೈಚಾರಿಕತೆಯ ಪ್ರಖರ ಜ್ಯೋತಿಯಾಗಿ ಬೆಳಗಿದ್ದಾರೆ. ಅವರ ವ್ಯಕ್ತಿತ್ವ ಅತ್ಯಂತ ನೇರ, ಧಿಟ್ಟ, ನಿಷ್ಠುರಿಯಾಗಿತ್ತು. ಹೇಳಬೇಕಾದುದ್ದನ್ನು ಯಾವದೇ ಮುಲಾಜಿಲ್ಲದೇ ನೇರವಾಗಿ ಹೇಳುವ ಎದೆಗಾರಿಕೆ ಅವರಲ್ಲಿತ್ತು. ಅವರ ಸಾಮಾಜಿಕ, ಸಾಹಿತ್ಯಕ ಕೊಡುಗೆ ಅನನ್ಯವಾಗಿದೆ ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ಶನಿವಾರ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ 903ನೇ ಜಯಂತಿಯ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇಂದಿನ ಒತ್ತಡದ ಬದುಕಿನಲ್ಲಿ ಅನೇಕ ಜಂಜಾಟಗಳಲ್ಲಿಯೇ ಬಳಲುತ್ತಿರುವ ವ್ಯಕ್ತಿಯ ಜೀವನ ಮತ್ತು ಸಮಾಜವೆಂಬ ದೋಣಿಗೆ ಅಂಬಿಗರ ಚೌಡಯ್ಯನವರು ನೀಡಿರುವ ವಚನಗಳು ಕಡೆಗೋಲಾಗಿ ಕಾರ್ಯನಿರ್ವಹಿಸುತ್ತವೆ. ಅವರು ಹಾಕಿಕೊಟ್ಟ ಜೀವನ ಮಾರ್ಗದಲ್ಲಿ ನಾವೆಲ್ಲರೂ ಸಾಗಿದರೆ, ಜಾತಿ, ವರ್ಗ, ವರ್ಣರಹಿತ, ಕಲ್ಯಾಣ ರಾಷ್ಟ್ರದ ಪರಿಕಲ್ಪನೆ ನಿಜವಾಗಿಯೂ ಅನುಷ್ಠಾನಗೊಳ್ಳುವದರಲ್ಲಿ ಯಾವುದೇ ಸಂಶಯವಿಲ್ಲವೆಂದರು.
ಉಪನ್ಯಾಸಕ ರವೀಂದ್ರಕುಮಾರ ಬಟಗೇರಿ ಮಾತನಾಡಿ, ಅಂಬಿಗರ ಚೌಡಯ್ಯನವರು ಮಾತು ಮತ್ತು ಕೃತಿ ಒಂದಾಗಿತ್ತು. ಕಾಯಕ, ದಾಸೋಹ, ಭಕ್ತಿ, ಲಿಂಗ, ಜಂಗಮ, ಭವಿ, ಸಮಾನತೆ, ಮಾನವೀಯತೆ, ಅಂತಃಕರುಣೆ, ಶೋಷಣೆ ವಿರುದ್ಧ ಧ್ವನಿ, ಮೌಢ್ಯತೆ, ಕಂಧಾಚಾರ, ಅಂಧಶ್ರದ್ಧೆಗಳ ವಿರೋಧಿ ಧ್ವನಿ, ವೈಚಾರಿಕತೆಯ ಕಿಡಿ ಹೊತ್ತಿಸಿದ್ದು ಅವರ ಕೃತಿ ಹಾಗೂ ವಚನಗಳಲ್ಲಿ ಕಂಡು ಬರುತ್ತದೆಯೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶರಣಮ್ಮ ಭಾವಿಕಟ್ಟಿ, ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಪ್ರಕಾಶ ಪಾಟೀಲ, ರೇಣುಕಾ ಚಿಕ್ಕಮೇಟಿ, ರಾಮಚಂದ್ರಪ್ಪ ಟಿ.ಹಕ್ಕಿ, ದೇವೇಂದ್ರಪ್ಪ ಬಡಿಗೇರ್, ಸಿದ್ದಾರೂಡ ಬಿರಾದಾರ, ರಂಜಿತಾ ಠಾಕೂರ್, ಸಮೀನಾ ಬೇಗಂ, ಸಹಾಯಕ ಭಾಗಣ್ಣ ಹರನೂರ್ ಹಾಗೂ ವಿದಾರ್ಥಿಗಳು ಪಾಲ್ಗೊಂಡಿದ್ದರು.