ಅಂಬಾನಿ ಕುಟುಂಬದಿಂದ ೫೧ ಸಾವಿರ ಜನರಿಗೆ ಅನ್ನಸಂತರ್ಪಣೆ

ಜಾಮ್‌ನಗರ,ಫೆ.೨೯-ಅಂಬಾನಿ ಕುಟುಂಬದ ಕಿರಿಯ ಪುತ್ರ ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆಯು ಅನ್ನ ಸೇವೆಯೊಂದಿಗೆ ಆರಂಭವಾಗಿದೆ.
ಅನಂತ್ ಅವರ ಮದುವೆಗೂ ಮುನ್ನ ಅಂಬಾನಿ ಕುಟುಂಬವು ಅನ್ನ ಸೇವೆಯಡಿ ಗ್ರಾಮದ ಸುಮಾರು ೫೧ ಸಾವಿರ ಜನರಿಗೆ ಅನ್ನಸಂತರ್ಪಣೆ ಮಾಡಿದೆ.
ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸೇರಿದಂತೆ ಅಂಬಾನಿ ಕುಟುಂಬದ ಇತರ ಸದಸ್ಯರು ಜಾಮ್‌ನಗರದ ರಿಲಯನ್ಸ್ ಟೌನ್‌ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ ಗ್ರಾಮಸ್ಥರಿಗೆ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ಬಡಿಸಿದ್ದಾರೆ. ರಾಧಿಕಾ ಅವರ ತಾಯಿಯ ಅಜ್ಜಿ ಮತ್ತು ಪೋಷಕರಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಕೂಡ ಅನ್ನ ಸೇವೆಯಲ್ಲಿ ಪಾಲ್ಗೊಂಡಿದ್ದರು. ಇದು ಮುಂದಿನ ಕೆಲವು ದಿನಗಳವರೆಗೆ ಮುಂದುವರಿಯುತ್ತದೆ.


ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಆಚರಣೆಗಳಿಗಾಗಿ ಸ್ಥಳೀಯ ಸಮುದಾಯದ ಆಶೀರ್ವಾದ ಪಡೆಯಲು ಅಂಬಾನಿ ಕುಟುಂಬವು ಅನ್ನ ಸೇವೆಯನ್ನು ಆಯೋಜಿಸಿದೆ. ಭೋಜನದ ನಂತರ ಬಂದವರು ಸಾಂಪ್ರದಾಯಿಕ ಜಾನಪದ ಸಂಗೀತವನ್ನು ಆನಂದಿಸಿ ದ್ದಾರೆ. ಖ್ಯಾತ ಗುಜರಾತಿ ಗಾಯಕಿ ಕೀರ್ತಿದನ್ ಗಧ್ವಿ ತಮ್ಮ ಗಾಯನದ ಮೂಲಕ ನೆರೆದಿದ್ದ ಜನರ ಮನಸೆಳೆದರು.
ಅಂಬಾನಿ ಕುಟುಂಬದಲ್ಲಿ ಊಟ ಬಡಿಸುವ ಸಂಪ್ರದಾಯ ಹಳೆಯದು. ಅಂಬಾನಿ ಕುಟುಂಬ ಶುಭ ಸಮಾರಂಭಗಳಲ್ಲಿ ಊಟ ಬಡಿಸುತ್ತಿದೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ದೇಶವು ಬಿಕ್ಕಟ್ಟಿನಲ್ಲಿದ್ದಾಗಲೂ, ರಿಲಯನ್ಸ್ ಫೌಂಡೇಶನ್, ಅನಂತ್ ಅಂಬಾನಿ ಅವರ ತಾಯಿ ನೀತಾ ಅಂಬಾನಿ ಅವರ ನೇತೃತ್ವದಲ್ಲಿ, ವಿಶ್ವದ ಅತಿದೊಡ್ಡ ಆಹಾರ ವಿತರಣಾ ಕಾರ್ಯಕ್ರಮವನ್ನು ನಡೆಸಿತು. ಕುಟುಂಬದ ಸಂಪ್ರದಾಯವನ್ನು ಮುಂದಕ್ಕೆ ತೆಗೆದುಕೊಂಡು, ಅನಂತ್ ಅಂಬಾನಿ ತಮ್ಮ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಅನ್ನ ಸೇವೆಯೊಂದಿಗೆ ಪ್ರಾರಂಭಿಸಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳು ಮಾರ್ಚ್ ೧ ರಿಂದ ಮಾರ್ಚ್ ೩ ರವರೆಗೆ ನಡೆಯಲಿದೆ. ಈ ಮೂರು ದಿನಗಳಲ್ಲಿ ದೇಶ, ಜಗತ್ತಿನ ಖ್ಯಾತ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.