ಅಂಬರೀಶ್ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ: ಸಿಎಂ

ಬೆಂಗಳೂರು,ಮಾ.27- ರೆಬಲ್ ಸ್ಟಾರ್ ಅಂಬರೀಷ್ ಎಲ್ಲರ ಮನಸ್ಸನ್ನು ಗೆದ್ದ ನೇರ ದಿಟ್ಟ ವ್ಯಕ್ತಿತ್ವದ ಅಂಬರೀಷ್ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ಹಲವು ಪ್ರತಿಭೆಯಿರುವ ಮೇರು ವ್ಯಕ್ತಿತ್ವ ಅವರದ್ದು. ಸಿನಿಮಾದಲ್ಲಿ ಸಹಜವಾಗಿ ನಟನೆ ಮಾಡುತ್ತಿದ್ದರು. ಜನರನ್ನು ಹಿಡಿದಿಟ್ಟುಕೊಳ್ಳುವ ವ್ಯಕ್ತಿತ್ವ ಅಂಬರೀಷ್ ಅವರಿಗಿತ್ತು ಎಂದು ಗುಣಗಾನ ಮಾಡಿದ್ದಾರೆ.

ಮೌರ್ಯ ಸರ್ಕಲ್‌ ನಿಂದ ಬಸವೇಶ್ವರ್‌ ಸರ್ಕಲ್‌ ವರೆಗಿನ ರೇಸ್‌ ಕೋರ್ಸ್‌ ರಸ್ತೆಗೆ ರೆಬೆಲ್‌ ಸ್ಟಾರ್‌ ಡಾ.ಎಂ.ಹೆಚ್ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಅನಾವರಣಗೊಳಿಸಿದ ಬಳಿಕ ಅವರು ಮಾತನಾಡಿದರು.

ಅಂಬರೀಶ್ ಅವರ ನೆನಪಿಗಾಗಿ ಇವತ್ತು ರೇಸ್ ಕೋರ್ಸ್ ರಸ್ತೆಯನ್ನು ಅಂಬರೀಶ್ ಅವರ ಹೆಸರಿನಲ್ಲಿ ಅತ್ಯಂತ ಸಂತೋಷದಿಂದ ನಾಮಕರಣ ಮಾಡಿದ್ದೇವೆ.ಇದು ಅವರು ಹೆಚ್ಚು ಓಡಾಡಿದ ಸ್ಥಳ. ಎಲ್ಲ ಅಭಿಮಾನಿಗಳ ಒತ್ತಾಸೆ ಮೇರೆಗೆ ಇವತ್ತು ಇವರ ಹೆಸರನ್ನು ಇಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ರೀಲ್ ಆ್ಯಂಡ್ ರಿಯಲ್ ಲೈಫ್ ಎರಡು ಒಂದೆಯಾಗಿದ್ದು, ನೇರ ವ್ಯಕ್ತಿತ್ವ ಅವರದ್ದಾಗಿತ್ತು. ಕ್ರೀಡೆಯಲ್ಲೂ ಪ್ರತಿಭೆ ಹೊಂದಿದ್ದ ಅವರು, ಸಾರ್ವಜನಿಕ ಜೀವನಕ್ಕೆ ಬಂದಮೇಲೆ ವಸತಿ ಸಚಿವರಾಗಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಕಾವೇರಿ ವಿಚಾರ ಬಂದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟವರು. ಅಧಿಕಾರ ಅವರನ್ನು ಹುಡುಕಿಕೊಂಡು ಬರುತ್ತಿತ್ತು ಎಂದರು.

ಅಂಬರೀಶ್ ಅವರು ನನ್ನ ಮಿತ್ರರು. ಅವರ ಜೀವನ ತೆರೆದ ಪುಸ್ತಕ. ಹಲವಾರು ಬಾರಿ ಬೇಟಿಯಾಗಬೇಕು ಅಂದಾಗ ಅಲ್ಲೇ ರೇಸ್ ಕೋರ್ಸ್ ನಲ್ಲಿ ಇರುತ್ತೇನೆ ಬಾರಯ್ಯ ಎನ್ನುವವರು. ಅವರ ಹೆಸರನ್ನು ಬಿಟ್ಟು ಬೇರೆ ಯಾರ ಹೆಸರು ಕೂಡ ಈ ರಸ್ತೆಗೆ ಸೂಕ್ತವಲ್ಲ. ಅವರ ಕುಟುಂಸ್ಥರು ಒಪ್ಪಿ ಬಂದಿದ್ದಾರೆ. ಅವರಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು.
.
ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಶ್‌, ಪುತ್ರ ಅಭಿಷೇಕ್‌ ಅಂಬರೀಶ್‌, ನಟ ರಾಘವೇಂದ್ರ ರಾಜ್‌ ಕುಮಾರ್‌, ಫಿಲಂ ಚೇಂಬರ್‌ ಅಧ್ಯಕ್ಷ ಭಾ.ಮ ಹರೀಶ್‌ , ರಾಕ್‌ ಲೈನ್‌ ವೆಂಕಟೇಶ್‌, ಚಿನ್ನೆಗೌಡರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.