ಅಂಬಯ್ಯ ನುಲಿರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ರಾಯಚೂರು.ಅ.28- ರಾಜ್ಯ ಸರ್ಕಾರ ಪ್ರಕಟಿಸಿದ 65 ಜನ ರಾಜ್ಯೋತ್ಸವ ಪುರಸ್ಕೃತರಲ್ಲಿ ರಾಯಚೂರಿನ ವಚನ ಗಾಯಕರಾದ ಅಂಬಯ್ಯ ನುಲಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನವೆಂಬರ್ 01 ರಂದು ಪ್ರತಿಷ್ಠಿತ ಈ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಲಿದೆ. ಒಟ್ಟು 65 ಜನ ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜಿಲ್ಲೆಯಿಂದ ಅನೇಕರ ಹೆಸರು ಶಿಫಾರಸ್ಸುಗೊಂಡಿದ್ದವು. ಆದರೆ, ವಚನ ಗಾಯಕರಾದ ಅಂಬಯ್ಯ ನುಲಿ ಅವರು ರಾಜ್ಯದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಂಬಯ್ಯ ನುಲಿ ಅವರು ಮೂಲತಃ ಶಿಕ್ಷಕ ವೃತ್ತಿಯಲ್ಲಿದ್ದರೂ, ಪ್ರವೃತ್ತಿಯಿಂದ ಅವರೊಬ್ಬ ಅತ್ಯುತ್ತಮ ವಚನ ಗಾಯಕರಾಗಿದ್ದರು. ರಾಯಚೂರು ತಾಲೂಕಿನ ಹೊಸೂರು ಗ್ರಾಮದ ನಿವಾಸಿಯಾದ ಇವರು ಶಿಕ್ಷಕರಾಗಿ ಮಾನ್ವಿ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ತಮ್ಮ ಕಾರ್ಯ ಕ್ಷೇತ್ರದಲ್ಲಿಯೇ ಪ್ರಸ್ತುತ ವಾಸವಾಗಿದ್ದಾರೆ. ಅನೇಕ ಶರಣರ ಹಾಡುಗಳನ್ನು ಹಾಡುವ ಮೂಲಕ ಅತ್ಯಂತ ಜನಪ್ರಿಯರಾಗಿದ್ದರು. ರಾಜ್ಯದ ವಚನ ಸಂಗೀತರಾರಲ್ಲಿ ಅಂಬಯ್ಯ ನುಲಿ ಅವರು ತಮ್ಮದೇಯಾದ ವಿಶಿಷ್ಟ ಪರಿಚಯ ಹೊಂದಿದವರಾಗಿದ್ದರು. ನುಲಿ ಅವರ ವಚನ ಗಾಯನ ಅತ್ಯಂತ ಮಧುರ ಮತ್ತು ಆಕರ್ಷಣಿಯ. ಇವರು ಅಂತರಾಷ್ಟ್ರೀಯ ಕಲಾವಿದರು ಹೌದು. ಆಕಾಶವಾಣಿ, ದೂರದರ್ಶನದಲ್ಲಿ ಎ ಗ್ರೇಡ್ ಕಲಾವಿದರಾಗಿ ಗುರುತಿಸಿಕೊಂಡವರು. ಈ ಸ್ಥಾನವನ್ನು ನರಸಿಂಹ ವಡವಾಟಿ ನಂತರ ಪಡೆದುಕೊಂಡ ಎರ‌ಡನೇ ವ್ಯಕ್ತಿ ಇವರಾಗಿದ್ದಾರೆ.
ತಂದೆಯವರು ನಾಟಕ, ನಿರ್ದೇಶಕರು ಮತ್ತು ಬರಹಗಾರರು. ಸಂಗೀತ ಕ್ಷೇತ್ರದಲ್ಲಿ ಒಟ್ಟು ಐವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ಒಬ್ಬರು ನಮ್ಮವರಾದ ಅಂಬಯ್ಯ ನುಲಿ ಎನ್ನುವುದು ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ದೇಶ, ವಿದೇಶಗಳಲ್ಲೂ ಕಾರ್ಯಕ್ರಮ ನೀಡಿದ ಕೀರ್ತಿ ಇವರದ್ದು. ಅತ್ಯಂತ ಸರಳ ಮತ್ತು ವಚನ ಗಾಯನದಂತೆ ಕಾಯಕವೇ ಜೀವವೆನಿಸಿಕೊಂಡ ಅಂಬಯ್ಯ ನುಲಿ ಅವರು ಗಾಯನವೇ ತಮ್ಮ ಉಸಿರಾಗಿಸಿಕೊಂಡವರು. ಅಂಬಯ್ಯ ನುಲಿ ಅವರ ಸಂಗೀತ ಕಾರ್ಯಕ್ರಮಕ್ಕೆ ಅಪಾರ ಸಂಗೀತಾಭಿಮಾನಿಗಳು ಸೇರಿಸುವಂತಹ ಆಕರ್ಷಕ ವ್ಯಕ್ತಿತ್ವ.
ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯಿಂದ ಅನೇಕರು ಆಕಾಂಕ್ಷಿಗಳಾಗಿದ್ದರು. ಪ್ರಶಸ್ತಿಗಾಗಿ ಲಾಬಿ ನಡೆದಿದ್ದವು. ಆದರೆ, ಅಂಬಯ್ಯ ನುಲಿ ಅವರು ನಿರೀಕ್ಷಿತವಾಗಿ ಈ ಪ್ರಶಸ್ತಿ ಭಾಗ್ಯ ಒಲಿದು ಬಂದಿದೆ. ಪ್ರಶಸ್ತಿಗಾಗಿ ಲಾಬಿ ನಡೆಸುವುದರಿಂದ ಅತ್ಯಂತ ದೂರವಿದ್ದರೂ, ಪ್ರತಿಭೆಯನ್ನು ಹುಡುಕಿಕೊಂಡು ಪ್ರಶಸ್ತಿ ಬಂದಿದೆ.