
ಕಾಗವಾಡ :ಮಾ.3: ಬದುಕಿನುದ್ದಕ್ಕೂ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪರೋಪಕಾರ ಮನೋಧರ್ಮವನ್ನು ಅಳವಡಿಸಿಕೊಂಡಿದ್ದ ಉಗಾರ ಬುದ್ರುಕ ಗ್ರಾಮದ ಅಣ್ಣಾಸಾಬ ರಾಮು ಕುಂಬಾರ (56) ಮರಣದ ನಂತರವು 4 ಜನ ಅಂಧರಿಗೆ ಕಣ್ಣು ದಾನ ಮಾಡಿ ಅವರ ಬಾಳಿಗೆ ಬೆಳಕಾಗಿ ಈ ಜನ್ಮವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ.
ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ಅಣ್ಣಾಸಾಬ ರಾಮು ಕುಂಬಾರ ಈತನು ಉಗಾರ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಗುರುವಾರ ದಿ. 2 ರಂದು ಮುಂಜಾನೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾದರು. ಅವರ ನಿಧನದ ನಂತರ ಅವರ ಕುಟುಂಬ ವರ್ಗದವರು ಮೃತರ ಮನದಾಸೆಯಂತೆ ಕಣ್ಣು ದಾನ ಮಾಡಲು ಮುಂದಾಗಿ ಕೂಡಲೇ ಕಾಗವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರ ತಜ್ಞ ಡಾ. ವಿಶಾಲ ಮಾಳವದಕರ ಅವರಿಗೆ ವಿಷಯವನ್ನು ತಿಳಿಸಿದಾಗ ಅವರು ಪಕ್ಕದ ಮಹಾರಾಷ್ಟ್ರ ರಾಜ್ಯದ ಸಾಂಗಲಿಯ ಟಿ.ಕೆ. ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರಿಗೆ ವಿಷಯ ತಿಳಿಸಿ ಅವರು ಬಂದು ಶಸ್ತ್ರಚಿಕಿತ್ಸೆ ಮೂಲಕ ನೇತ್ರವನ್ನು ತೆಗೆದುಕೊಂಡರು. ಮೃತನ ಪುತ್ರ ತಂದೆಯ ಎರಡು ನೇತ್ರಗಳನ್ನು ಕರ್ನಾಟಕ ಸರ್ಕಾರದ ವೈದ್ಯಾಧಿಕಾರಿ ಡಾ. ವಿಶಾಲ ಅವರಿಗೆ ಹಸ್ತಾಂತರಿಸಿದರು. ಅದನ್ನು ಡಾ. ವಿಶಾಲ ಸಾಂಗಲಿಯ ಟಿ.ಕೆ. ಕಣ್ಣಿನ ಆಸ್ಪತ್ರೆಗೆ ನೀಡಿದರು.
ಡಾ. ವಿಶಾಲ ಮಾಳವದಕರ ಕಣ್ಣು ದಾನ ಮಾಡಿದ ಮೃತನ ಕುಟುಂಬಸ್ಥರಿಗೆ ಪ್ರಮಾಣ ಪತ್ರವನ್ನು ನೀಡಿ ಮಾತನಾಡುತ್ತಾ ಜೀವನದೂದಕ್ಕೂ ಸಾರ್ಥಕ ಜೀವನ ಸಾಗಿಸಿದ ಮೃತರು ಮರಣದ ನಂತರವು 4 ಜನ ಅಂಧರ ಬಾಳಿಗೆ ಬೆಳಕಾಗಿದ್ದಾರೆಂದು ಹೇಳಿದರು.
ಮೃತರು ಪತ್ನಿ, 2 ಜನ ಪುತ್ರಿಯರು, ಓರ್ವ ಪುತ್ರ, 3 ಜನ ಸಹೋದರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಈ ಸಮಯದಲ್ಲಿ ಡಾ. ವಿಶಾಲ ಮಾಳವದಕರ, ಸಾಂಗಲಿಯ ಡಾ. ನಿಖೇತ ರಾಥೋಟ, ಡಾ. ದೇವಿಕಾ ಮಹಾಜನ, ಸದಾಶಿವ ಕುಂಬಾರ, ಸಂತೋಷ ಕುಂಬಾರ, ವಿರುಪಾಕ್ಷ ಕುಂಬಾರ, ಭರಮು ಕುಂಬಾರ, ಸುರೇಶ ಕುಂಬಾರ, ಮಹಾದೇವ ಕುಂಬಾರ, ಶೀತಲ ಕುಂಬಾರ ಸೇರಿದಂತೆ ಅನೇಕರು ಇದ್ದರು.