ಅಂಧತ್ವ ಮುಕ್ತ ರಾಷ್ಟ್ರ ನಿರ್ಮಾಣದ ಕನಸು ಸಾಕಾರಗೊಳ್ಳಲು ಯುವಕರು ಕೈಜೋಡಿಸಿ

ಬೀದರ,ನ.28- ಇಲ್ಲಿನ ಕಮಲನಗರದಲ್ಲಿ ಅಂಧತ್ವ ಮುಕ್ತ ಭಾರತದ ನಿರ್ಮಾಣ ನಮ್ಮೆಲ್ಲರ ಕನಸಾಗಿದ್ದು, ಅದನ್ನು ನನಸಾಗಿಸುವ ನಿಟ್ಟಿನಲ್ಲಿ ನೇತ್ರದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪವಿತ್ರ ಕಾರ್ಯಕ್ಕೆ ಯುವಕರು ಕೈಜೋಡಿಸಲಿ ಎಂದು ಶಿವಣಿ, ಹಲಬರ್ಗಾ ಮತ್ತು ಹೈದರಾಬಾದ ಮಠದ ಪೀಠಾಧಿಕಾರಿ ಹಾವಗಿಲಿಂಗೇಶ್ವರ ಸ್ವಾಮಿ ನುಡಿದರು.
ಪಟ್ಟಣದ ಭಾಗಿರಥಿ ಪಬ್ಲಿಕ್ ಶಾಲಾವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ನೇತ್ರಜ್ಯೋತಿ ಶಿಬಿರದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು
ದೇಹದ ಸುಂದರತೆಗೆ ಆರೋಗ್ಯ ಮುಖ್ಯವಾಗಿದೆ. ಭಗವಂತನು ನೀಡಿದ ಬದುಕು ಒಳ್ಳೆ ವಿಚಾರ ಮತ್ತು ಆಚಾರಗಳಿಂದ ಕೂಡಿದಲ್ಲಿ ಕುಟುಂಬ ಮತ್ತು ಸಮಾಜ ಸುಂದರವಾಗಿ ನಿರ್ಮಾಣವಾಗುತ್ತದೆ. ಅಂಧರ ಬಾಳಿಗೆ ಬೆಳಕು ನೀಡುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ಯುವಕರು ಕೈಜೋಡಿಸಬೇಕು ಎಂದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಡಾ.ಸಂತೋಷಕುಮಾರ ಮಾತನಾಡಿ ಬದಲಾದ ಜೀವನ ಶೈಲಿ ಮತ್ತು ಆಹಾರ ಪದ್ದತಿಯಿಂದ 100ರಲ್ಲಿ 15 ಜನರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ.ಸಿಗರೇಟ್ ಮತ್ತು ಮದ್ಯ ಸೇವನೆಯಿಂದ 40 ತೆರನಾದ ಕ್ಯಾನ್ಸ್‍ರ್ ರೋಗಗಳು ಬರುತ್ತಿದೆ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಹೇಶ ಬಿರಾದಾರ ಮಾತನಾಡಿ ಆರೋಗ್ಯ, ಜ್ಞಾನ ಮತ್ತು ಸಂಸ್ಕಾರ ಪಡೆಯುವುದು ಅತ್ಯಂತ ಕಠಿಣ ಕಾರ್ಯವಾಗಿದೆ.ಜಾಗೃತಿ ಕೊರತೆಯಿಂದ ಅಂಧತ್ವದ ಪ್ರಮಾಣ ಹೆಚ್ಚಾಗುತ್ತಿದೆ.ಮೊಬೈಲ್, ಕಂಪ್ಯೂಟರ್ ಬಳಕೆ ಪ್ರಮಾಣವನ್ನು ಮಿತಿಗೊಳಿಸಿ ಅಂಧತ್ವ ರೋಗಕ್ಕೆ ಕೊನೆಗಾಣಿಸಬೇಕು ಎಂದರು.
ಸಂಸ್ಥೆ ಅಧ್ಯಕ್ಷ ಅಜೀತ ಶಾಸ್ತ್ರಿ ಅವರು ಅಧ್ಯಕ್ಷತೆ ವಹಿಸಿದರು.ವೇದಿಕೆಯಲ್ಲಿ ಬ್ರಿಮ್ಸ್ ಆಸ್ಪತ್ರೆ ಔಷಧಿಶಾಸ್ತ್ರದ ಮುಖ್ಯಸ್ಥ ಡಾ.ವಿಜಯಕುಮಾರ ಅಂತಪ್ಪಾ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಅಡಳಿತಾಧಿಕಾರಿ ಡಾ.ಶ್ರೀಮಂತ ಇದ್ದರು.ಶೀತಲ ಮತ್ತು ಸಂಗಡಿಗರು ಸ್ವಾಗತ ಗೀತೆ ನುಡಿಸಿದರು.ಡಾ.ಅಜೀತ ಶಾಸ್ತ್ರಿ ಸ್ವಾಗತಿಸಿದರು.ಮುಖ್ಯಗುರು ಮನೋಜಕುಮಾರ ಹಿರೇಮಠ ವಂದಿಸಿದರು. 500 ರೋಗಿಗಳಿಗೆ ಕಣ್ಣಿನ ತಪಾಸಣೆ ನಡೆಸಿ ಕನ್ನಡಕ ವಿತರಿಸಲಾಯಿತು.