ಅಂಧಕಾರದಿಂದ ಬೆಳಕಿನಡೆಗೆ ನಡೆಸುವ ಗುರುವೇ ಪ್ರತ್ಯಕ್ಷ ದೇವರು

ಕೋಲಾರ,ಸೆ.೭- ನಾವು ಮಾಡುವ ಪ್ರತಿ ವೃತ್ತಿಯೂ ಶ್ರೇಷ್ಠವೇ ಆದರೆ ಅಂಧಕಾರದಿಂದ ಬೆಳಕಿನಡೆಗೆ ನಮ್ಮನ್ನು ನಡೆಸುವ ಗುರುವು ನಮಗೆ ಪ್ರತ್ಯಕ್ಷ ದೇವರು, ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಗುರು ಹಿರಿಯರಿಗೆ ಗೌರವ ನೀಡುವಂತವರಾಗ ಬೇಕೆಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಮೂಹ ವಿದ್ಯಾ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ: ಎಂ.ಚಂದ್ರಶೇಖರ್ ಡಿ.ಲಿಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕೋಲಾರ-ಬಂಗಾರಪೇಟೆ ಮುಖ್ಯ ರಸ್ತೆಯ ಹಂಚಾಳಗೇಟ್‌ನ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಸಮೂಹ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದ ಡಾ:ಸರ್ವೇಪಲ್ಲಿ ರಾಧಕೃಷ್ಣನ್ ರವರ ನೆನಪಿನಲ್ಲಿ ೬೧ ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾವ ಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಮಾತನಾಡುತ್ತಾ, ನಮಗೆ ಶೂದ್ರ ಜನಾಂಗಕ್ಕೆ ಮೊಟ್ಟ ಮೊದಲು ಪಾಠ ಶಾಲೆಗಳನ್ನು ತೆರೆದು ವಿದ್ಯಾಭ್ಯಾಸವನ್ನು ಪ್ರಾರಂಭಿಸಿದವರು ಜ್ಯೋತಿರಾವ್ ಬಾಪುಲೆ, ಅದೇಷ್ಟೋ ಅಪಮಾನಗಳನ್ನು ಸಹಿಸಿಕೊಂಡು ಮಹಿಳೆಯರಿಗೆ ಅಕ್ಷರ ಜ್ಞಾನವನ್ನು ನೀಡಿದ ಸಾವಿತ್ರಿ ಬಾಯಿ ಜ್ಯೋತಿ ಬಾಪುಲೆ ರವರು ಎಂದು ಆ ಮಹಾನೀಯರ ಗುಣಗಾನ ಮಾಡಿದರು. ಶೂದ್ರ ಜನಾಂಗ ಇಂದು ಶಿಕ್ಷಣ ಪಡೆಯಲು ಕಾರಣೀಭೂತರಾಗಿದ್ದಾರೆ. ವಿದ್ಯೆ ಮಹಿಮೆಯನ್ನು ಅರಿತ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಷ್ಟೋ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಶಾಲೆಗೆ ಸೇರಿಸಿ ಉನ್ನತ ವ್ಯಾಸಂಗಕ್ಕೆ ಸೇರಿಸಿದರು.
ಸಮಾಜದಲ್ಲಿ ಗುರುವು ತನ್ನ ವಿದ್ಯೆಯನ್ನು ಧಾರೇ ಎರೆಯುವುದರ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣದ ಕತೃವಾಗಿದ್ದಾನೆ. ಎಲ್ಲಿ ಶಾಲೆಯ ಬಾಗಿಲು ತೆರೆದು ಶಿಕ್ಷಣ ದೊರೆಯುತ್ತದಯೋ ಅಲ್ಲಿ ಸುಶಿಕ್ಷಿತರ ಸಂಖ್ಯೆ ವೃದ್ದಿಯಾಗುತ್ತದೆ.ಈ ಹಂತದಲ್ಲಿ ರಾಷ್ಟ್ರ ಕವಿ ಕುವೆಂಪು ರವರು ಸಹ ಗುರು ಸ್ಥಾನದಲ್ಲಿದ್ದು, ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಪ್ರಜ್ಞಾವಂತ ರಾಜಕಾರಣಿಗಳಿಂದ ರಚಿಸಲ್ಪಟ್ಟ ಕಾಯಿದೆಗಳಿಂದ ತಿದ್ದಲಾರದ ಸಮಾಜ, ವ್ಯಕ್ತಿಗಳಲ್ಲಿ ಶಾಂತಿ, ಸುವ್ಯವಸ್ಥೆ, ಸಹಬಾಳ್ವೆ ನೆಲೆಗೊಳ್ಳಬೇಕಾದರೆ ಶಾಲೆಯಲ್ಲಿಯೇ ಯಾವುದು ಸರಿ ಯಾವುದು ತಪ್ಪು ಎಂದು ಆಲೋಚಿಸುವ ಮಗುವಿನ ವ್ಯಕ್ತಿಯ ವ್ಯಕ್ತಿತ್ವ ವಿಕಾಸಗೊಂಡು ರೂಪುಗೊಳ್ಳುವುದು ಶಾಲೆ ಶಿಕ್ಷಣದಿಂದ ಮಾತ್ರ ಸಾದ್ಯ ಎಂದರು. ಗುರುಗಳು ವಿದ್ಯಾರ್ಥಿಯ ಬೌದ್ದಿಕ ಬೆಳವಣಿಗೆಯ ಜೊತೆಜೊತೆಗೆ ನಮ್ಮ ಚಿಂತನೆ ಆಲೋಚನೆಗಳನ್ನು ಪರಿಪೂರ್ಣಗೊಳಿಸುವ ಶಕ್ತಿ ಗುರುವಿಗಿದೆ. ಗುರುವಿನ ದೃಷ್ಠಿಯಲ್ಲಿ ಮಾನವ ಜಾತಿ ಒಂದೇ ’ಇಲ್ಲಿ ಎಲ್ಲಾರು ಸಮಾನರೂ ಎಂಬ ಭಾವನೆ ಹೊಂದಿರುವ ಗುರುವೇ ನಿಜವಾದ ಗುರು’ ಇವರಿಂದ ಸಿಗುವ ನೈತಿಕ ಶಿಕ್ಷಣದ ಇಂದು ಭಾರತಕ್ಕೆ ಅಗತ್ಯವಿದೆ ಆಗ ಮಾತ್ರ ಸ್ವಾಸ್ಥ್ಯ ಸರ್ವೋದಯನಿಷ್ಟವಾದ ಆದರ್ಶ ನವಸಮಾಜ ನಿರ್ಮಾಣ ಸಾದ್ಯವೆಂದು ತಿಳಿಸಿದರು.
ಗುರುವಿನ ಪಾತ್ರ ಮಗುವಿನ ವ್ಯಕ್ತಿತ್ವ ವಿಕಾಸನಕ್ಕೆ ಸಹಕಾರಿ, ಇಲ್ಲವಾದರೆ ಸಮಾಜ, ರಾಜ್ಯ, ರಾಷ್ಟ್ರ ತಲೆ ತಗ್ಗಿಸುವಂತಹ ಪಿಡುಗುಗಳಾಗಿ ಪ್ರಜೆಗಳು ಉದ್ಬವವಾಗುತ್ತಾರೆ. ಸಮಾಜ ದ್ರೋಹಿ ಕೃತ್ಯಗಳು ನಿಲ್ಲಬೇಕಾದರೆ, ರಾಷ್ಟ್ರದಲ್ಲಿ ಸುಶಿಕ್ಷತರ ಸಂಖ್ಯೆ ಹೆಚ್ಚಾಗಲು ಶಾಲಾ ಶಿಕ್ಷಣ ಮತ್ತು ಗುರುಗಳೇ ಮುಖ್ಯ ಎಂದು ಗುರು ಪರಂಪರೆಯನ್ನು ಮೆಚ್ಚಿ ಪ್ರಶಂಸೆ ಮಾಡಿದರು,
ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಿ.ವೆಂಕಟೇಶಪ್ಪ, ಕಾರ್ಯಾಧ್ಯಕ್ಷ ಪಿ.ಎಂ. ವೆಂಕಟೇಶಪ್ಪ, ಪ್ರಧಾನ ಕಾರ್ಯದರ್ಶಿ ಎನ್.ವೆಂಕಟಪತಿ, ಉಪಾಧ್ಯಕ್ಷರುಗಳಾದ ಸಿ.ಜಿ. ಶ್ರೀನಿವಾಸ್ ಮುನಿರೆಡ್ಡಿ, ಚಲಪತಿ, ಮುಖ್ಯ ಶಿಕ್ಷಕ ಎಸ್.ಲಕ್ಷ್ಮೀನಾರಾಯಣರೆಡ್ಡಿ, ಎಲ್ಲಾ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಜಿ.ಎಸ್. ನಂದೀಶ ಸರ್ವಪಲ್ಲಿ ರಾಧಕೃಷ್ಣನ್ ರವರ ಕುರಿತು ಮಾತನಾಡಿದರು. ಪ್ರಾರ್ಥನೆ ೧೦ ನೇ ತರಗತಿ ಆಶಾ, ಸ್ವಾಗತ ಕೀರ್ತನ ೧೦ನೇ ತರಗತಿ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.