ಶಿವಮೊಗ್ಗ, ಎ. 21: ‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತೃಗಳಲ್ಲ, ಮಿತ್ರರೂ ಅಲ್ಲ..’
ಎಂಬ ಮಾತು, ಸದ್ಯ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಎದುರಾಳಿಗಳಾಗಿರುವ ಬಿಜೆಪಿ
ಅಭ್ಯರ್ಥಿ ಹರತಾಳು ಹಾಲಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ
ಅವರಿಗೆ ಸೂಕ್ತವಾಗಿ ಅನ್ವಯವಾಗುತ್ತದೆ..!ಮಾಜಿ ಸಿಎಂ ಎಸ್.ಬಂಗಾರಪ್ಪ ಗರಡಿಯಲ್ಲಿ ಏಕಕಾಲಕ್ಕೆ ರಾಜಕೀಯ ಪ್ರವೇಶಿಸಿ, ಅವರ
ಕೃಪಾಕಟಾಕ್ಷದಿಂದ ಏಕಕಾಲದಲ್ಲಿಯೇ ವಿಧಾನಸಭಾ ಚುನಾವಣಾ ಕಣಕ್ಕಿಳಿದು ಆಯ್ಕೆಯಾಗಿ
ಶಾಸಕರಾಗಿ ಆಯ್ಕೆಯಾಗಿದ್ದರು. ಗಳಸ್ಯ-ಕಂಠಸ್ಯರಾಗಿದ್ದರು. ಎಸ್.ಬಂಗಾರಪ್ಪ ಬಿಜೆಪಿ
ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾಗ ಅವರನ್ನು ಬೆಂಬಲಿಸಿ, ಸಮಾಜವಾದಿ ಪಕ್ಷದ
ಚಿಹ್ನೆಯಾದ ಸೈಕಲ್ ನಲ್ಲಿ ವಿಧಾನಸಭೆಗೆ ಆಗಮಿಸಿ ದೇಶದ ಗಮನ ಸೆಳೆದಿದ್ದರು!
ಸೀಮಿತಾವಧಿಯಲ್ಲಿಯೇ ರಾಜಕೀಯ ಕಾರಣಗಳಿಂದ ಗುರು ಎಸ್.ಬಂಗಾರಪ್ಪರಿಂದ ದೂರವಾಗಿದ್ದರು.
ಮತ್ತೇ ಬಿಜೆಪಿ ತೆಕ್ಕೆಗೆ ಮರಳಿದ್ದರು. ಆದರೆ ಕಾಲಾಂತರದಲ್ಲಿ, ಬದಲಾದ ರಾಜಕೀಯ ನಡೆ,
ನಾನಾ ಕಾರಣಗಳಿಂದ ಬದ್ಧ ವೈರಿಗಳಾಗಿ ಮಾರ್ಪಟ್ಟಿದ್ದರು..!
ಇದೀಗ ಮೊದಲ ಬಾರಿಗೆ ಚುನಾವಣಾ ಅಖಾಡದಲ್ಲಿ, ಹರತಾಳು ಹಾಲಪ್ಪ ಹಾಗೂ ಬೇಳೂರು
ಗೋಪಾಲಕೃಷ್ಣ ಪರಸ್ಪರ ಮುಖಾಮುಖಿಯಾಗಿದ್ದಾರೆ. ಇಬ್ಬರ ನಡುವೆ ವಾಕ್ಸಮರ
ತೀವ್ರಗೊಂಡಿದೆ. ಕಾಲಿಗೆ ಚಕ್ರ ಕಟ್ಟಿಕೊಂಡವರ ರೀತಿಯಲ್ಲಿ ಕ್ಷೇತ್ರ ಸುತ್ತು
ಹಾಕುತ್ತಿದ್ದಾರೆ. ಚುನಾವಣೆಯನ್ನು ಅಕ್ಷರಶಃ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ.
ಈ ಕಾರಣದಿಂದ ಸಾಗರ ವಿಧಾನಸಭಾ ಕ್ಷೇತ್ರದ ಚುನಾವಣ ಕಣ ರಂಗೇರುವುದರ ಜೊತೆಗೆ
ಕಾವೇರುವಂತೆ ಮಾಡಿದೆ. ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.