ಅಂತ್ಯಕ್ರಿಯೆಗೆ ತೆರಳುತ್ತಿದ್ದಾಗ ಟ್ರ್ಯಾಕ್ಟರ್​ ಪಲ್ಟಿಯಾಗಿ ಮಹಿಳೆ ಸಾವು, 15 ಮಂದಿಗೆ ಗಾಯ

ಕಲಬುರಗಿ:ಮಾ.27: ಅಂತ್ಯಕ್ರಿಯೆಗೆ ಹೊರಟಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಓರ್ವ ಮಹಿಳೆ ಮೃತಪಟ್ಟು, 15 ಜನ ಗಾಯಗೊಂಡಿರುವ ಘಟನೆ ಚಿಂಚೋಳಿ ತಾಲೂಕಿನ ಕಲ್ಲೂರು ರೋಡ್‌ ಗ್ರಾಮದ ಬಳಿ ನಡೆದಿದೆ.
ಮಳಖೇಡ ಗ್ರಾಮದ ಯಲ್ಲಮ್ಮ ಭೀಮರಾವ್ (40) ಮೃತ ಮಹಿಳೆ. ಗಾಯಗೊಂಡ 15 ಮಂದಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ.
ಸೇಡಂ ತಾಲೂಕಿನ ಮಳಖೇಡದಿಂದ 23 ಮಂದಿ ಟ್ರ್ಯಾಕ್ಟರ್‌ನಲ್ಲಿ ಅಂತ್ಯಕ್ರಿಯೆಗೆಂದು ಹೊರಟಿದ್ದರು. ಈ ವೇಳೆ ಟ್ರ್ಯಾಕ್ಟರ್‌ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ.
ಈ ಕುರಿತು ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.