ಅಂತು ಬಂತು ಬರ ಪರಿಹಾರ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೨೭:ಕೇಂದ್ರ ಸರ್ಕಾರ ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್)ಯಡಿ ರಾಜ್ಯಕ್ಕೆ ೩,೪೫೪ ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿದೆ.
ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಯಾಗಿಲ್ಲ ಎಂದು ರಾಜ್ಯಸರ್ಕಾರ ಸುಪ್ರೀಂಕೋರ್ಟ್‌ನ ಮೊರೆ ಹೋಗಿತ್ತು. ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಏ. ೨೯ ಸೋಮವಾರದ ಒಳಗೆ ಚುನಾವಣಾ ಆಯೋಗದ ಅನುಮತಿ ಪಡೆದು ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಅದರಂತೆ ಇಂದು ೩,೪೫೪ ಕೋಟಿ ರೂ. ಬರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ರಾಜ್ಯದ ಕಾನೂನು ಹೋರಾಟಕ್ಕೆ ಗೆಲುವು ಸಿಕ್ಕಂತಾಗಿದೆ.
ರಾಜ್ಯದ ೨೨೩ ತಾಲ್ಲೂಕುಗಳಲ್ಲಿ ಭೀಕರ ಬರ ಇದ್ದು, ಕಳೆದ ನವೆಂಬರ್‌ನಲ್ಲೆ ರಾಜ್ಯಸರ್ಕಾರ ೧೮,೧೭೪ ಕೋಟಿ ರೂ. ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸದ್ಯ ಕೇಂದ್ರ ಸರ್ಕಾರ ೩,೪೫೪ ಕೋಟಿ ರೂ.ಗಳ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರಮೋದಿ ಅವರು ಇಂದು ರಾಜ್ಯಕ್ಕೆ ೨ ದಿನಗಳ ಚುನಾವಣಾ ಪ್ರಚಾರಕ್ಕೆ ಆಗಮಿಸುವ ಮೊದಲೇ ಕೇಂದ್ರಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ. ಈ ಮೂಲಕ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ಮಾತುಗಳಿಗೆ ಅಂತ್ಯ ಹಾಡುವ ಪ್ರಯತ್ನ ನಡೆಸಿದೆ. ಜತೆಗೆ ಬರ ಪರಿಹಾರ ಬಿಡುಗಡೆ ಮಾಡದ ವಿಚಾರವನ್ನು ಚುನಾವಣಾ ವಿಚಾರವನ್ನಾಗಿಸಿರುವ ಕಾಂಗ್ರೆಸ್‌ಗೂ ತಿರುಗೇಟು ನೀಡಿದೆ.
ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ಕರ್ನಾಟಕದ ಜತೆ ಕೇರಳ ಮತ್ತು ತಮಿಳುನಾಡು ರಾಜ್ಯಗಳು ನ್ಯಾಯಾಲಯದ ಮೆಟ್ಟಿಲೇರಿದ್ದು ತಮಿಳುನಾಡಿಗೂ ಎನ್‌ಡಿಆರ್‌ಎಫ್ ಅಡಿ ೨೭೬ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಬರ ಪರಿಹಾರ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯದ ನಡುವೆ ದೊಡ್ಡ ಸಂಘರ್ಷವೇ ನಡೆದಿತ್ತು ಬರ ಪರಿಹಾರ ವಿಚಾರದಲ್ಲಿ ಮೋದಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಸಚಿವರುಗಳು ಹಾಗೂ ಕಾಂಗ್ರೆಸ್ ಸಂಸದರು ದೆಹಲಿಯಲ್ಲಿ ಪ್ರತಿಭಟನೆ ಸಹ ನಡೆಸಿದ್ದರು. ಏನು ಮಾಡಿದರೂ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡದ ಕಾರಣ ಕೊನೆಯ ದಾರಿ ಎಂಬಂತೆ ನ್ಯಾಯಾಲಯಕ್ಕೆ ರಾಜ್ಯಸರ್ಕಾರ ಮೊರೆ ಹೋಗಿತ್ತು.
ಈಗ ರಾಜ್ಯದ ಕೂಗಿಗೆ ಕೇಂದ್ರ ಸರ್ಕಾರ ಕೊನೆಗೂ ಸ್ಪಂದಿಸಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಸಹ ಪ್ರಧಾನಿ ಅವರನ್ನು ಭೇಟಿ ಮಾಡಿ ಬರ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಿದ್ದರು.
ರಾಜ್ಯದಲ್ಲಿ ೧೪ ಕ್ಷೇತ್ರಗಳ ಮೊದಲ ಹಂತ ಮತದಾನ ಮುಗಿದು ಮೇ ೭ ರಂದು ೨ನೇ ಹಂತದ ಮತದಾನ ೧೪ ಕ್ಷೇತ್ರಗಳಲ್ಲಿ ನಡೆಯಲಿದ್ದು, ಈ ಎಲ್ಲದರ ನಡುವೆಯೇ ಕೇಂದ್ರಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದೆ.

ಬರ ಪರಿಹಾರ ಕಡಿಮೆ ಸಿಎಂ ಅತೃಪ್ತಿ
ರಾಜ್ಯದಲ್ಲಿ ತಲೆದೋರಿದ ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರಕಾರ ೧೮,೧೭೨ ಕೋಟಿ ರೂ. ನೀಡುವಂತೆ ಬೇಡಿಕೆ ಸಲ್ಲಿಸಿದ್ದರೆ, ಕೇಂದ್ರ ಸರಕಾರ ಕೇವಲ ರೂ.೩೪೫೪ ಕೋಟಿ ಪರಿಹಾರ ಬಿಡುಗಡೆ ಮಾಡಿರುವುದು ತೀವ್ರ ಅನ್ಯಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಸುಮಾರು ೪೮ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೂ.೩೫ ಸಾವಿರ ಕೋಟಿಯಷ್ಟು ಬೆಳೆ ಹಾನಿಯಾಗಿದೆ. ಈ ಹಾನಿಯ ಪ್ರಮಾಣದನ್ವಯ ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ೧೮೧೭೨ ಕೋಟಿ ರೂ. ಬರ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿತ್ತು.
ಮೇಲಾಗಿ, ಈ ನಿಟ್ಟಿನಲ್ಲಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಭೇಟಿ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ಸುಪ್ರಿಂಕೋರ್ಟ್ ಮಧ್ಯಸ್ಥಿಕೆಯಲ್ಲಿ ಪರಿಹಾರ ಪಡೆಯುವಂತಾಯಿತು ಎಂದರು.
ಈಗ ರಾಜ್ಯಕ್ಕೆ ನೀಡಿರುವ ಬರ ಪರಿಹಾರ ತುಂಬಾ ಕಡಿಮೆ. ಹೀಗಾಗಿ, ಈ ನಿಟ್ಟಿನಲ್ಲಿ ಪಕ್ಷದ ಹಿರಿಯರು ಹಾಗೂ ಸರಕಾರದ ಎಲ್ಲ ಸಚಿವರೊಂದಿಗೆ ಚರ್ಚಿಸಿ ಮುಂದಿನ ಯೋಜನೆ ರೂಪಿಸಲಾಗುವುದು ಎಂದು ನುಡಿದರು.