
ರಾಯಚೂರು.ಜು.೧೨- ಪಟೇಲ್ ರಸ್ತೆಯಲ್ಲಿ ಇಂದು ಗುಂಡಿಗಳು ಮುಚ್ಚುವ ಕಾರ್ಯವನ್ನು ಕೈಗೊಳ್ಳಲಾಯಿತು. ಕಳೆದ ಅನೇಕ ದಿನಗಳಿಂದ ಗುಂಡಿಗಳ ಮಧ್ಯೆ ಓಡಾಡುವ ಜನರು ಇಂದು ನಿರಾಳವಾಗಿ ಈ ರಸ್ತೆಯಲ್ಲಿ ಓಡಾಡಿದರು.
ಮುಂಜಾನೆಯಿಂದ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲಾಯಿತು. ವೆಟ್ಮಿಕ್ಸ್ ಹಾಕುವ ಮೂಲಕ ಗುಂಡಿಗಳನ್ನು ಮುಚ್ಚಲಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಪಟೇಲ್ ರಸ್ತೆ ದುಸ್ಥಿತಿ ಬಗ್ಗೆ ಸರಣಿ ವರದಿಯ ನಂತರ ಎಚ್ಚೆತ್ತುಕೊಂಡ ನಗರಸಭೆ ಮತ್ತು ಜನಪ್ರತಿನಿಧಿಗಳು ಗುಂಡಿ ಮುಚ್ಚುವ ಪ್ರಕ್ರಿಯೆಗೆ ಮುಂದಾಗುವ ಮೂಲಕ ಮಳೆಗಾಲದಲ್ಲಿ ಜನರು ಯಾವುದೇ ಆತಂಕವಿಲ್ಲದೆ, ಓಡಾಡಲು ನೆರವಾಗಿದೆ. ನಿರಂತರ ಮಳೆಯಿಂದ ನಗರದ ಪಟೇಲ್ ರಸ್ತೆ ಕೆರೆಯಾಗಿ ಮಾರ್ಪಟ್ಟಿತ್ತು.
ಗುಂಡಿ ಮುಚ್ಚುವ ಪ್ರಕ್ರಿಯೆ ಕೇವಲ ಪಟೇಲ್ ರಸ್ತೆಗೆ ಮಾತ್ರ ಸೀಮಿತಗೊಳ್ಳದೆ ಇತರೆ ಭಾಗದಲ್ಲಿ ಗುಂಡಿ ಬಿದ್ದ ರಸ್ತೆಗಳು ಮುಚ್ಚುವ ಬಗ್ಗೆಯೂ ಚಿಂತಿಸುವ ಅಗತ್ಯವಿದೆ. ಕೇವಲ ಮಾಧ್ಯಮಗಳಲ್ಲಿ ಬಂದರೆ ಮಾತ್ರ ಸ್ಪಂದಿಸುವ ಯಾಂತ್ರಿಕತೆ ಬಿಟ್ಟು, ಜನ ಸಾಮಾನ್ಯರು ಯಾವ ರೀತಿಯಲ್ಲಿ ಸಂಚಾರದ ಸಮಸ್ಯೆಯಿಂದ ಪೀಡಿತರಾಗಿದ್ದಾರೆ ಎನ್ನುವುದನ್ನು ಮನವರಿಕೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುವತ್ತ ಗಮನ ಹರಿಸಿದರೆ, ಜನ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯ. ಇಲ್ಲದಿದ್ದರೆ ಅಪಘಾತಗಳಿಗೆ ಗುರಿಯಾಗಿ ಉಸಿರೆ ಬಿಡುವ ಅಪಾಯಕ್ಕೆ ನಗರಸಭೆ ಮತ್ತು ಇಲ್ಲಿಯ ಜನಪ್ರತಿನಿಧಿಗಳೆ ನೇರ ಹೊಣೆಯಾಗಬೇಕಾಗುತ್ತದೆ.