ಅಂತಿಮ ಹಂತಕ್ಕೆ ಭಾರತ-ಬ್ರಿಟನ್ ವ್ಯಾಪಾರ ಒಪ್ಪಂದ

ಲಂಡನ್, ಆ.೨೩- ವಿಶ್ವದಲ್ಲೇ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತ ಈಗಾಗಲೇ ಹಲವು ದೇಶಗಳ ಜೊತೆ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಈ ನಡುವೆ ಇದೀಗ ಬ್ರಿಟನ್ ಜೊತೆಗಿನ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆ ಅಂತಿಮ ಹಾಗೂ ಕೊಂಚ ಕಠಿಣಕಾರಿ ಹಂತದಲ್ಲಿದೆ ಎಂದು ಬ್ರಿಟನ್ ಸರ್ಕಾರದ ಮೂಲಗಳು ತಿಳಿಸಿವೆ.
ಭಾರತ ಜೊತೆಗೆ ಈಗಾಗಲೇ ಹಲವು ರಾಷ್ಟ್ರಗಳು ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದು, ಇನ್ನೂ ಹಲವು ದೇಶಗಳು ತುದಿಗಾಲಲ್ಲಿ ನಿಂತುಕೊಂಡಿದೆ. ಈ ಪೈಕಿ ಬ್ರಿಟನ್ ಕೂಡ ಸೇರಿದೆ. ಭಾರತ-ಬ್ರಿಟನ್ ನಡುವಿನ ವ್ಯಾಪಾರ ಒಪ್ಪಂದದ ಸಂಬಂಧಿಸಿದ ಮಾತುಕತೆ ಬಹಳ ಹಿಂದೆಯೇ ಆರಂಭವಾಗಿದ್ದು, ಸದ್ಯ ಅಂತಿಮ ಹಂತದಲ್ಲಿದ್ದರೂ ಕೆಲವೊಂದು ಉತ್ಪನ್ನಗಳ ಮೇಲಿನ ತೆರಿಗೆ ವಿಚಾರದಲ್ಲಿ ಗೊಂದಲ ಮುಂದುವರೆದಿದೆ ಎನ್ನಲಾಗಿದೆ. ಇನ್ನು ಈ ವಾರ ಜಿ-೨೦ಯ ವ್ಯಾಪಾರ ಸಚಿವರ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬ್ರಿಟನ್ ವ್ಯಾಪಾರ ಕಾರ್ಯದರ್ಶಿ ಕೆಮಿ ಬಡೆನೋಚ್ ಭಾರತಕ್ಕೆ ಭೇಟಿ ನೀಡುತ್ತಿದ್ದು, ಇಲ್ಲಿ ಬಹುತೇಕ ಅಂತಿಮ ಹಂತದ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ಅದರಲ್ಲೂ ಸೆಪ್ಟೆಂಬರ್‌ನಲ್ಲಿ ನಡೆಯುವ ಜಿ-೨೦ ಭೇಟಿಯಲ್ಲಿ ಪಾಲ್ಗೊಳ್ಳಲು ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಭಾರತಕ್ಕೆ ಆಗಮಿಸಲಿದ್ದು, ಈ ವೇಳೆಗಾಗಲೇ ಎಲ್ಲವೂ ಪರಿಪೂರ್ಣತೆ ಸಾಧಿಸುವ ಸಾಧ್ಯತೆ ಇದೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಆದರೆ ಆ ವೇಳೆ ವ್ಯಾಪಾರ ಒಪ್ಪಂದವನ್ನು ಬ್ರಿಟನ್ ಸರ್ಕಾರ ಪೂರ್ಣ ರೀತಿಯಲ್ಲಿ ಒಪ್ಪಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದೇ ಹೇಳಲಾಗಿದೆ. ಬ್ರಿಟನ್‌ನಿಂದ ಭಾರತಕ್ಕೆ ರಫ್ತಾಗುವ ಕಾರ್, ವಿಸ್ಕಿ ಮುಂತಾದ ವಸ್ತುಗಳ ಮೇಲಿನ ಸುಂಕವನ್ನು ಇಳಿಸುವ ಬಗ್ಗೆ ಬ್ರಿಟನ್ ಹೆಚ್ಚು ಆಸಕ್ತಿ ಹೊಂದಿದೆ. ಆದರೆ ಇದರಿಂದ ಭಾರತದ ಉತ್ಪನ್ನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತ ಸುಂಕ ಇಳಿಸುವ ಬಗ್ಗೆ ನಿರಾಸಕ್ತಿ ಹೊಂದಿದೆ ಎನ್ನಲಾಗಿದೆ. ಇನ್ನು ಬ್ರೆಕ್ಸಿಟ್ ಬಳಿಕ ಯುರೋಪ್‌ನಿಂದ ದೂರವಾದ ಬಳಿಕ ಬ್ರಿಟನ್ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಬೆಳವಣಿಗೆ ದರ ಕುಸಿತಗೊಂಡಿದೆ. ಅದೂ ಅಲ್ಲದೆ ಕಳೆದ ಹಲವು ತಿಂಗಳುಗಳಲ್ಲಿ ಬ್ರಿಟನ್ ಹಣದುಬ್ಬರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.