ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಿ ಸಿದ್ದಪಡಿಸಲಾಗಿದೆ: ಜಿ.ಕುಮಾರ ನಾಯಕ

ರಾಯಚೂರು,ಜ.೦೮- ಅಂತಿಮ ಮತದಾರರ ಪಟ್ಟಿಯನ್ನು ಜ.೫ರಂದು ಪ್ರಕಟಿಸಲಾಗಿದ್ದು, ಈಗಾಗಲೇ ರಾಜಕೀಯ ಪಕ್ಷಗಳ ಸಭೆಯನ್ನು ಕರೆದು ಅಂತಿಮ ಮತದಾರರ ಪಟ್ಟಿ ಹಾಗೂ ಚುನಾವಣೆ ಕುರಿತಂತೆ ಎಲ್ಲಾ ರೀತಿಯ ಸಿದ್ದತೆ ಹಾಗೂ ನಿಯಮಗಳ ಕುರಿತು ಚರ್ಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಮತದಾರರ ಪಟ್ಟಿಯ ವೀಕ್ಷಕ ಜಿ.ಕುಮಾರ ನಾಯಕ ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಂತಿಮ ಮತದಾರರ ಪಟ್ಟಿ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಚುನಾವಣೆ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕ್ರಮಗಳನ್ನು ಕೈಗೊಂಡು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಅದರಂತೆ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿರುವುದು ಕಂಡುಬಂದಿದ್ದು, ಆದರೆ ಅದರ ಬಗ್ಗೆ ಯಾವುದೇ ಗೊಂದಲಗಳು ಬೇಡ ಮತದಾರರ ಪಟ್ಟಿಯಲ್ಲಿ ಒಂದೇ ವಿಳಾಸ, ಒಮದೇ ಭಾವಚಿತ್ರ ಹಾಗೂ ಒಂದೇ ಹೆಸರಿನ್ನು ಪರಿಶೀಲಿಸಿ ಅಂತಹ ಒಂದೇ ರೀತಿಯಾದ ಮಾಹಿತಿಯುಳ್ಳ ಹಾಗೂ ವ್ಯತ್ಯಾಸವಿಲ್ಲದ ಮತದಾರರನ್ನು ತೆಗೆದು ಹಾಕಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆಯು ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು, ಪರಿಷ್ಕರಣೆ ಎಂದರೇ ಕೇವಲ ಮತದಾರರ ಪಟ್ಟಿಯನ್ನು ಗಮನಿಸುವುದಲ್ಲ ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಹಾಗೂ ತೆಗೆದು ಹಾಕಬೇಕಾದ ಕಾರ್ಯವನ್ನು ಮಾಡಬೇಕಾಗುತ್ತದೆ ಎಂದರು.
೧೮ ವರ್ಷದ ಮೇಲ್ಪಟ್ಟ ಎಲ್ಲರೂ ಮತದಾರರ ಪಟ್ಟಿಗೆ ಸೇರ್ಪಡೆಯಾಗಬೇಕು ಅದರಲ್ಲೂ ಹೆಣ್ಣುಮಕ್ಕಳು ಕಡ್ಡಾಯವಾಗಿ ಸೇರ್ಪಡೆಯಾಗಬೇಕು. ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಮತದಾರರ ಪಟ್ಟಿಯಲ್ಲಿ ಹೆಣ್ಣುಮಕ್ಕಳಿದ್ದಾರೆ. ಕರಡು ಮತದಾರರ ಪಟ್ಟಿ ೨೦೨೨ರ ನ.೦೯ರ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೭,೭೩,೨೨೩ ಪುರುಷರು, ೭,೯೫,೪೬೯ ಮಹಿಳೆಯರಿದ್ದಾರೆ ಒಟ್ಟು ೧೫,೬೮,೬೯೨ ಮತದಾರರು ಕರಡು ಮತಪಟ್ಟಿಯಲ್ಲಿದ್ದು, ೨೦೨೩ರ ಇತ್ತೀಚಿನ ಅಂತಿಮ ಮತದಾರರ ಪಟ್ಟಿಯಾನುಸಾರ ಒಟ್ಟು ೧೫,೯೩,೦೦೮ ಮತದಾರರಲ್ಲಿ ೭,೮೪,೮೪೨ ಪುರುಷರು ಮತ್ತು ೮,೦೮,೧೬೬ ಮಹಿಳಾ ಮತದಾರರಿದ್ದಾರೆ ಎಂದು ತಿಳಿಸಿದರು.
ಅಂತಿಮ ಮತದಾರರ ಪಟ್ಟಿಯಾನುಸಾರ ಜಿಲ್ಲೆಯಲ್ಲಿ ಒಟ್ಟು ೨೩,೫೮೪ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಮರಣ ಹೊಂದಿದ ೮,೦೦೬ ಸ್ಥಳಾಂತರವಾದ ೧೨,೩೭೧ ಮತದಾರರು, ವಲಸೆ ಸ್ಥಳಾಂತರ ೧,೩೩೪ ಹಾಗೂ ಇತರೆ ೧,೮೭೩ ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶಶಿಧರ ಕುರೇರ, ಪ್ರೊಬೆಷನರಿ ಐಎಎಸ್ ಅಧಿಕಾಕರಿ ಅಪರ್ಣಾ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ಸಹಾಯಕ ಆಯುಕ್ತ ರಜನಿಕಾಂತ ಚೌಹ್ವಾಣ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಆಶಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.