ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಚಿತ್ರದುರ್ಗ, ಸೆ. 2 – ನಗರದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಿ.ಡಿ. ರಸ್ತೆ, ಚಿತ್ರದುರ್ಗ ಇಲ್ಲಿ ನಡೆದ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಎನ್.ಎಸ್.ಎಸ್., ಕ್ರೀಡೆ, ಯೂತ್ ರೆಡ್‌ಕ್ರಾಸ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ನಡೆಯಿತು.ಸಮಾರೋಪ ನುಡಿಗಳನ್ನಾಡಿದ ಎ.ಜೆ. ಪರಮಶಿವಯ್ಯ ಅವರು, ಸಮಾರೋಪ ಸಮಾರಂಭ ಹಬ್ಬದ ರೂಪದಲ್ಲಿ ಕಳೆಗಟ್ಟಿದೆ. ಭಾರತ ಸದೃಢವಾಗಬೇಕಾದರೆ ಯುವ ಜನಾಂಗದ ಪಾತ್ರ ಬಹಳ ಮುಖ್ಯವಾಗಿದೆ. ಹಲವಾರು ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಸದೃಢ ರಾಷ್ಟ್ರ ನಿರ್ಮಾಣಕ್ಕೆ ತಯಾರಾಗುವುದು ತುಂಬಾ ಅವಶ್ಯಕವಾಗಿದೆ. ಯುವಕರು ಮೊಬೈಲ್ ಎನ್ನುವ ತೊಂದರೆ ಕೊಡುವ ಸಾಧನವನ್ನು ಒಳ್ಳೆಯ ಜ್ಞಾನ ಸಂಪಾದನೆಗಾಗಿ ಬಳಸಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಮನಸ್ಸನ್ನು ಹರಿಬಿಟ್ಟ ಹದಿಹರೆಯ ವಯಸ್ಸಿನಲ್ಲಿ ಜೀವನದ ದಾರಿ ತಪ್ಪಬಾರದು. ಉತ್ತಮ ಸಮಾಜ ನಿರ್ಮಾಣಕ್ಕೆ ಯುವಕರು ಸಮರ್ಪಣಾ ಮನೋಭಾವದಿಂದ ಕೈಜೋಡಿಸಬೇಕಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳು ಮರುಕಳಿಸದಂತೆ ಎಚ್ಚರ ವಹಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿ, ಎಲ್ಲರಿಗೂ ಶುಭ ಹಾರೈಸಿದರು. ಮುಖ್ಯ ಅತಿಥಿ ಡಾ. ಡಿ. ಧರಣೇಂದ್ರಯ್ಯ, ಪ್ರಾಂಶುಪಾಲರು, ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು, ಹಿರಿಯೂರು ಇವರು ಮಾತನಾಡಿ, ಮೂರು ದಶಕಗಳಿಗೂ ಹೆಚ್ಚು ಕಾಲ ಮಹಿಳಾ ಕಾಲೇಜಾಗಿ ನಡೆದುಬಂದAತಹ ಸಂಸ್ಥೆ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಅವಕಾಶವಿರುಬೇಕೆಂಬ ಕಾರಣದಿಂದಾಗಿ ಸಹ ಶಿಕ್ಷಣ ಕಾಲೇಜಾಗಿ ಬದಲಾಗಿದೆ. ಇಂದಿನ ಕಾರ್ಯಕ್ರಮ ಪಠ್ಯೇತರ ಚಟುವಟಿಕೆಗಳಿಂದಾಗಿ ಹಬ್ಬದ ವಾತಾವರಣದಲ್ಲಿ ನಡೆಯುತ್ತಿದೆ. ಸಂಸ್ಥೆ ತನ್ನ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಸಮರ್ಪಣೆ ಮಾಡುತ್ತಿದೆ. ವಿದ್ಯಾರ್ಥಿಗಳು ವಿದ್ಯಾವಂತರಾಗಿ ಸಮಾಜಕ್ಕೆ ವಿಶೇಷ ಸೇವೆ ಸಲ್ಲಿಸುವುದರ ಮೂಲಕ ಸಮಾಜದ ಋಣ ತೀರಿಸಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ಪದವಿಯನ್ನು ಪಡೆಯುವುದರ ಮೂಲಕ ಯಾವ ಸ್ಥಾನವನ್ನಾದರೂ ಪಡೆಯಬಹುದು. ಈ ದಿಸೆಯಲ್ಲಿ ಕೌಶಲ್ಯವನ್ನು ಹೊಂದುವುದು ಕೂಡ ಅತೀ ಅವಶ್ಯವಾಗಿರುತ್ತದೆ. ಸಂಸ್ಥೆಯಿಂದ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ವಿದ್ಯಾರ್ಥಿಗಳ ಹಸ್ತ ಯಾವಾಗಲೂ ಅಮೃತ ಹಸ್ತ, ಒಳ್ಳೆಯ ಸಾಧನೆಗೆ ಮೂಲ, ಸಮಾಜವು ಉತ್ತಮಗೊಳ್ಳಲು ವಿದ್ಯಾರ್ಥಿಗಳು ಶ್ರಮದ ಮೂಲಕ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ. ತಮಗೆ ವಿದ್ಯಾದಾನ ನೀಡಿದ ಮಠಗಳನ್ನು ಬೆಳೆಸಬೇಕು. ತಮ್ಮನ್ನು ತಾವು ಬಿಡುವಿನ ವೇಳೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಅದೃಷ್ಟವಂತರಾಗಬೇಕಾದರೆ ಆಸೆ, ಕನಸುಗಳನ್ನು ನನಸು ಮಾಡಿಕೊಳ್ಳುವತ್ತ ಸಿಗುವಂತಹ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು. ನೈತಿಕತೆಯನ್ನು ಬಿತ್ತುವಂತ ಸಂಸ್ಥೆ ಇದಾಗಿದೆ. ಒಳ್ಳೆಯ ಶಿಕ್ಷಣದಿಂದ ಸಿಗುವ ನೈತಿಕತೆ ಯುವ ಜನಾಂಗವನ್ನು ದುಶ್ಚಟಗಳಿಗೆ ದೂಡುವುದಿಲ್ಲ ಹಾಗೂ ಎಲ್ಲಿಯೂ ದುಡ್ಡಿಗೆ ಸಿಗುವುದಿಲ್ಲ. ನಮ್ಮ ದೇಶ ಅದ್ಭುತ ದೇಶ, ಇಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ಕೂಡ ಅದ್ಭುತವೇ ಸರಿ. ಯಾವುದೇ ಸಂದರ್ಭಗಳಲ್ಲೂ ದುಶ್ಚಟಗಳಿಗೆ ಬಲಿಯಾಗದಿರಿ. ಗುರಿ ಮರೆತು ಹೋಗುತ್ತದೆ. ಅನಕ್ಷರಸ್ಥರಿಂದಲೂ ಕಲಿಯುವುದು ಬಹಳಷ್ಟಿರುತ್ತದೆ, ದೇಶದಲ್ಲಿ ಕೊಳ್ಳುಬಾಕ ಸಂಸ್ಕೃತಿಯಿಂದಾಗಿ ಆರ್ಥಿಕವಾಗಿ ಹೊಡೆತ ಬೀಳುತ್ತಿದೆ. ಇಂದು ಸರಳತೆಯ ಬದುಕು ಜನರಿಗೆ ಬೇಕಾಗಿದೆ. ಅಪ್ರತಿಮ ಸಾಕ್ಷಿಯಾಗಿ 46 ರಾಷ್ಟ್ರಗಳಲ್ಲಿ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಸ್ಥಾಪಿತವಾಗಿದೆ. ಮೊಬೈಲ್ ಬಳಕೆಯಿಂದಾಗಿ ಸಂಸ್ಕಾರ ಇಲ್ಲದಂತಾಗಿದೆ. ತಂದೆ ತಾಯಿಗಳಿಗೆ ಸೇವೆ ಗೌರವವನ್ನು ನೀಡುವ ಮನೋಭಾವವನ್ನು ಬೆಳಿಸಿಕೊಳ್ಳಬೇಕಿದೆ. ಇಂದಿನ ಸ್ಪಧಾತ್ಮಕ ಜಗತ್ತಿನಲ್ಲಿ ನಾವೆಲ್ಲ ಇದ್ದೀವಿ. ಸ್ಪರ್ಧಾತ್ಮಕ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಮದುವೆ ಒಂದೇ ಜೀವನದ ಘಟ್ಟವಲ್ಲ. ಏನಾದರೂ ಸಾಧನೆ ಮಾಡಬೇಕಾದರೆ ದೊಡ್ಡ ಅಸ್ತçವೆಂದರೆ ಶಿಕ್ಷಣ ಮಾತ್ರ. ಹೆಣ್ಣು ಶಿಕ್ಷಣದ ಶಕ್ತಿ. ಅವರು ಸಂಕಷ್ಟದಲ್ಲಿ ಶಿಕ್ಷಣವನ್ನು ಪಡೆಯಬೇಕಾದ ಪರಿಸ್ಥಿತಿಯಿದೆ. ಬಾಲ್ಯ ವಿವಾಹವನ್ನು ತಡೆಗಟ್ಟಬೇಕಿದೆ. ಕಳವಳಿಕಾರಿಯಾದ ಅಂಶವೆಂದರೆ ಭಾರತದಲ್ಲಿ ಹೆಣ್ಣುಮಕ್ಕಳು ಕಣ್ಮರೆಯಾಗುತ್ತಿರುವುದು. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವುದರ ಮೂಲಕ ಸಂಪನ್ಮೂಲ ಕೊರತೆ ನೀಗಿಸಬೇಕಿದೆ. ಈ ಸಂಸ್ಥೆಯಿಂದ ಶಿಕ್ಷಣ ಪಡೆಯುತ್ತಿರುವವರು ಮೌಢ್ಯಗಳನ್ನು ದಿಕ್ಕರಿಬೇಕಿದೆ. ಬಡವರಿಗೆ ಹಾಲನ್ನು ಕೊಡುವ ಅಮೃತ ಹಸ್ತಗಳು ನಿಮ್ಮದಾಗಬೇಕು. ಇಡೀ ಸಮಾಜದ ರೋಗವನ್ನು ಹೊಡೆದೋಡಿಸುವ ಸಾಮಾಜಿಕ ಡಾಕ್ಟರ್, ಸಾಮಾಜಿಕ ಇಂಜಿನಿಯರ್, ಸಾಮಾಜಿಕ ಲಾಯರ್ ನೀವಾಗಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳೇ ದೊಡ್ಡ ಮೀಡಿಯಾ ಎಂಬುದಾಗಿ ತಿಳಿಸಿ, ಈ ಸಂಸ್ಥೆಯಲ್ಲಿ ಅದ್ಭುತ ಪ್ರತಿಭೆಗಳನ್ನು ನೋಡುವ ಅವಕಾಶ ಸಿಕ್ಕಿರುವುದು ಅಧ್ಯಾಪಕನಾಗಿರುವುದರಿಂದ ಎಂಬ ಹೆಮ್ಮೆಯ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸೈಯದ್ ಇಸಾಕ್, ನಿವೃತ್ತ ಸಹಾಯಕ ಪೊಲೀಸ್ ಕಮೀಷನರ್, ಮಾತನಾಡಿ, ಪೋಲೀಸರ ಬಗ್ಗೆ ಸಮಾಜದಲ್ಲಿ ಸ್ನೇಹಿತ ರೂಪ ಕೊಡಿ. ರಾಕ್ಷಸ ರೂಪ ಕೊಡಬೇಡಿ. ಪೋಲೀಸರ ಸೇವೆ ಅನುಪಮ ನ್ಯಾಯ ರಕ್ಷಣೆ ಪೊಲೀಸರ ಜವಾಬ್ದಾರಿ. ಯಾವಾಗಲೂ ಬಾಗಿಲು ಹಾಕುವುದಿಲ್ಲ. ಜನಗಳ ರಕ್ಷಣೆಗಾಗಿ ಯಾವಾಗಲೂ ತೆರೆದಿರುವಂತಹ ದೇವಸ್ಥಾನ. ಸಾಮಾಜಿಕ ಸೇವೆ ಮೂಲಕ ಸಾಮಜಿಕ ನ್ಯಾಯ ಒದಗಿಸಬೇಕಾದರೆ ಪೊಲೀಸ್ ಸೇವೆಯೂ ಅನಿವರ‍್ಯ ಎಂದೆನಿಸಿದೆ. ಪ್ರತಿಯೊಬ್ಬರೂ ಇನ್ನೊಬ್ಬರಿಗೆ ದಾರಿದೀಪವಾಗಿರಬೇಕು. ದೀಪ ಮುಖ್ಯವಾಗುವುದಿಲ್ಲ. ಅದರಿಂದ ಹೊರಹೊಮ್ಮುವ ಬೆಳಕು ಬಹಳ ಮುಖ್ಯ. 14ನೇ ವಿಧಿ ಸಮಾಜಕ್ಕೆ ಸಮಾನತೆ ನೀಡಿದ್ದು, ಲಿಂಗ ತಾರತಮ್ಯ ಸಲ್ಲದು ಎಂದು ತಿಳಿಸಿದೆ. ವಿದ್ಯಾರ್ಥಿಗಳು ಪ್ರಶ್ನೆ ಕೇಳೋದನ್ನು ಬೆಳೆಸಿಕೊಳ್ಳಬೇಕು. ಇದರಿಂದಾಗಿ ತನಗೆ ತಾನೇ ಬುದ್ಧಿವಂತಿಕೆ ಬೆಳೆಯುತ್ತದೆ. ಪ್ರತಿ ಹಂತದಲ್ಲೂ ಪ್ರಶ್ನೆ ಮಾಡುತ್ತಿರಬೇಕು. ಮೌಢ್ಯತೆಯ ವಿರುದ್ಧದ ಅರಿವು ನಮಗಿರಬೇಕು. ಎಲ್ಲಿಯವರೆಗೆ ಹಕ್ಕಿನ ಬಗ್ಗೆ ಅರಿವು ಮೂಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ಸಮಾನತೆ ಸಾಧಿಸಲು ಸಾಧ್ಯವಾಗುವುದಿಲ್ಲ. ವೇದಿಕೆಯನ್ನು ಯಾರೂ ಕಲ್ಪಿಸಿಕೊಡಲಾಗುವುದಿಲ್ಲ. ನಿಮಗೆ ನೀವೇ ಕಲ್ಪಿಸಿಕೊಳ್ಳಬೇಕೆಂದು ತಿಳಿಸಿದರು. ಸಂಸ್ಕಾರ ಎನ್ನುವುದನ್ನು ಲಿಂಗಭೇಧವಿಲ್ಲದೆ ಬೆಳೆಸಿಕೊಳ್ಳಬೇಕಾಗಿದೆ. ಪ್ರತಿ ಮನೆಯಲ್ಲೂ ಕಿರಿವಯಸ್ಸಿನವರು ಹಿರಿಯರಿಗೆ ಗೌರವ ಕೊಡುವ ಸಂಸ್ಕಾರ ಬೆಳೆಸಿಕೊಳ್ಳುವ ಅಗತ್ಯವಿದೆ. ಸಮಾಜದಲ್ಲಿ ಹೆಚ್ಚಾಗಿ ಸಂಸ್ಕಾರ ಹೆಣ್ಣಿನಿಂದ ಬರಬೇಕಿದೆ. ಹೆಣ್ಣನ್ನು ನೋಡುವ ದೃಷ್ಟಿ ಭಿನ್ನವಾಗಿರುತ್ತದೆ. ವಿದ್ಯಾರ್ಥಿಗಳು ಹೆಚ್ಚು ಪುಸ್ತಕಗಳನ್ನು ಓದುವ ಕಡೆ ಗಮನ ಹರಿಸಬೇಕಾಗಿದೆ, ನಾಗರೀಕ ಹಾಗೂ ಸಾಂಸ್ಕೃತಿಕ ಭಿನ್ನತೆಯಿಂದಾಗಿ ಸಾಮಾಜಿಕ ವ್ಯತ್ಯಯಗಳುಂಟಾಗುತ್ತವೆ. ಸಮಾಜ ನಿರ್ಮಾಣ ಹೆಚ್ಚಾಗಿ ಹೆಣ್ಣಿನಿಂದ ಆಗಬೇಕಿದೆ. ಏಕೆಂದರೆ ಹೆಣ್ಣುಮಕ್ಕಳು ಸಮಾಜ ವಾಹಿನಿಯ ಮುಖ್ಯಸ್ಥರು ನಿಮ್ಮ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳಿ. ಪ್ರೀತಿ ಪ್ರೇಮವೆಂಬ ಹಗಲಿನ ಪಾಶಕ್ಕೆ ಬಿದ್ದು ಜೀವನ ಕಳೆದುಕೊಳ್ಳಬೇಡಿ. ಯಾವಾಗಲೂ ಛಲ ನಿಮ್ಮಲ್ಲಿರಲಿ. ಕ್ಲಿಷ್ಟ ಸನ್ನಿವೇಶಗಳಲ್ಲಿ ದೈರ್ಯತೆ ಪ್ರದರ್ಶಿಸಿ ನಿಮ್ಮ ರಕ್ಷಣೆಗೆ ಸಿದ್ಧರಿರಿ ಎಂಬ ಕಿವಿಮಾತನ್ನು ತಿಳಿಸಿದರು.
ಡಾ. ಗೌರಮ್ಮ, ಪ್ರಾಂಶುಪಾಲರು, ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ಇವರು ಮಾತನಾಡುತ್ತ, ವಿದ್ಯಾರ್ಥಿಗಳು ಯಾವಾಗಲೂ ಎಚ್ಚರಿಕೆಯ ಹೆಜ್ಜೆ ಇಡಬೇಕು, ಅದರಲ್ಲೂ ಪದವಿ ಪಡೆದ ನಂತರದ ದಿನಗಳಲ್ಲಿ ಜೀವನಕ್ಕೆ ಬಹಳ ಮುಖ್ಯವಾದವುಗಳು ಪ್ರಾಮಾಣಿಕತೆ, ಬದ್ಧತೆ ಸೋಲನ್ನು ನಿಭಾಯಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ಎಲ್ಲರಲ್ಲೂ ನಯ, ವಿನಯ, ಕರುಣೆ ಪ್ರತಿಭೆ ಇರುತ್ತದೆ. ಅದನ್ನೆಲ್ಲ ನೀವು ಸಮರ್ಪಕವಾಗಿ ಬೆಳೆಸಿಕೊಳ್ಳುವ ಮನೋಸ್ಥಿತಿಯನ್ನು ಹೊಂದಿರಬೇಕು ಅಷ್ಟೇ. ಮಹಾನುಭಾವರ ಜೀವನ ಚರಿತ್ರೆಗಳನ್ನು ಓದಿ. ಸೋಲನ್ನು ಸಾಧನೆಯನ್ನಾಗಿ ಮಾಡಿಕೊಳ್ಳಿ. ಕೌಶಲ್ಯಭರಿತರಾಗಲು ಅಗತ್ಯವಿರುವ ಕೋರ್ಸುಗಳನ್ನು ವ್ಯಾಸಂಗಮಾಡಿ, ನಿಮ್ಮೆಲ್ಲರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂಬ ಶುಭ ಹಾರೈಕೆಗಳನ್ನು ತಿಳಿಸಿದರು.ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಚರ‍್ಯರಾದ ಡಾ. ಎಲ್. ಈಶ್ವರಪ್ಪ, ವಿದ್ಯಾರ್ಥಿಗಳು ಕಂಡಂತ ಕನಸುಗಳು ನನಸಾಗಲಿ ಎಂಬ ಆಶಯ ವ್ಯಕ್ತಪಡಿಸುತ್ತಾ, ಅಂದುಕೊಳ್ಳುವುದು ಜೀವನ ಅಲ್ಲ, ಹೊಂದುವುದೇ ಜೀವನ. ಹಾಗಾಗಿ ನಿಮ್ಮ ಜೀವನದಲ್ಲಿ ಉಂಟಾಗುವ ಎಲ್ಲಾ ರೀತಿಯ ಕಷ್ಟಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿ ತೋರಿಸಿ, ನಿಮ್ಮ ನೆನಪು ಉಳಿಯಲು ಅನುವು ಮಾಡಿಕೊಡುವಂತೆ ಅಂತಿಮ ವರ್ಷದ ವಿದ್ಯಾಥಿಗಳಿಗೆ ಕಿವಿಮಾತು ಹೇಳಿದರು. ಮುಂದಿನ ವರ್ಷಗಳಲ್ಲಿ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘಟನೆ ಮಾಡೋಣ ಎಂಬುದಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. 2020-21ನೇ ಶೈಕ್ಷಣಿಕ ಸಾಲಿನಲ್ಲಿ ವತಿಯಿಂದ ನಡೆದ ಎಲ್ಲಾ ವಿಭಾಗಗಳ ಪಠ್ಯ, ಪಠ್ಯೇತರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಂಕ್ಷಿಪ್ತ ವರದಿಯನ್ನು ಮಂಡಿಸಿದವರು – ಶ್ರೀಮತಿ ಗಾಯತ್ರಿ ಪಿ.ಸಿ. ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕರು. ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿಯರಾದ ನೀಲುಫರ್, ಕವನ, ಅಮೃತ ಎಸ್. ಹಾಗೂ ಚಂದನ ಬಿ. ಇವರುಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.