ಅಂತಿಮ ಘಳಿಗೆಯಲ್ಲಿ ಸಂದರ್ಶನ ದಿನಾಂಕ ಬದಲು: ಅಭ್ಯರ್ಥಿಗಳ ಪರದಾಟ

ಕಲಬುರಗಿ, ನ.13: ಗುಲ್ಬರ್ಗ ವಿಶ್ವವಿದ್ಯಾಲಯ ಮತ್ತು ಅದರಡಿ ಕಾರ್ಯನಿರ್ವಾಹಿಸುವ ಬೀದರ್ ಹಾಗೂ ರಾಯಚೂರು ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯನಿರ್ವಾಹಿಸಲು ಸಮಾಜ ವಿಜ್ಞಾನ ನಿಕಾಯದ 10 ವಿಭಾಗಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಇಂದು ಸಂದರ್ಶನ ನಡೆಯಬೇಕಿತ್ತು. ಆದರೆ ಉಪಕುಲಪತಿಗಳ ಆದೇಶದ ಮೇರೆಗೆ ನಿನ್ನೆ ಮದ್ಯಹ್ನವಷ್ಟೇ ಪತ್ರಿಕೋದ್ಯಮ ಹಾಗೂ ಮನೋವಿಜ್ಞಾನ ಸೇರಿದಂತೆ ಒಟ್ಟು 5 ವಿಭಾಗಗಳ ಸಂದರ್ಶನ ದಿನಾಂಕವನ್ನು ದಿಢೀರ್ ಎಂದು ಮುಂದೂಡಲಾಗಿದೆ.
ಇಂದು 10 ಗಂಟೆಯಿಂದ ಸಂದರ್ಶನ ನಡೆಯಬೇಕಿದ್ದರಿಂದ ದೂರದೂರುಗಳಿಂದ ತಲುಪಬೇಕಿದ್ದ ಎಷ್ಟೋ ಜನ ಅಭ್ಯರ್ಥಿಗಳು ನಿನ್ನೆಯೇ ತಮ್ಮ ಊರುಗಳಿಂದ ಹೊರಟುಬಂದಿದ್ದಾರೆ. ಸಂದರ್ಶನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಈ ರೀತಿ ಬದಲಾವಣೆ ಪ್ರಕಟಿಸಿರುವ ವಿವಿಯ ಕ್ರಮದ ಬಗ್ಗೆ ಅಭ್ಯರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸ್ಥಳೀಯರು ಮಾತ್ರವಲ್ಲದೇ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಅಭ್ಯರ್ಥಿಗಳು ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರು, ಉಪ ಕುಲಪತಿಗಳ ಈ ಅಂತಿಮ ಕ್ಷಣದ ಆದೇಶವನ್ನು ತಿಳಿದು ಸಮಯ-ಹಣ ಎರಡೂ ವ್ಯಯಿಸಿ ಇಲ್ಲಿಗೆ ಬಂದಿದ್ದು ನಿರಾಶೆ ಮೂಡಿಸಿದೆ. ಸಂದರ್ಶನಕ್ಕೆ ಕೇವಲ 3-4 ದಿನ ಇರುವಾಗ ಗುವಿವಿ ದಿನಾಂಕ ಪ್ರಕಟಿಸುತ್ತೆ. ನೂರಾರು ರೂಪಾಯಿ ಖರ್ಚು ಮಾಡಿ ಅರ್ಜಿ ಸಲ್ಲಿಸಿದ ಅದೆಷ್ಟೋ ಅಭ್ಯರ್ಥಿಗಳಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಮಾಹಿತಿಯೇ ಗೊತ್ತಾಗುವುದಿಲ್ಲ. ಎಚ್ಚರಿಕೆಯಿಂದಿದ್ದು ಎಲ್ಲಾ ವಿಚಾರ ಗಮನಿಸಿ ಸಂದರ್ಶನಕ್ಕೆ ಬಂದರೆ ಈಗ ಈ ಗತಿ! ಅಭ್ಯರ್ಥಿಗಳನ್ನು ಘನತೆಯಿಂದ ನಡೆಸಿಕೊಳ್ಳಬೇಕಿದ್ದ ಗುವಿವಿ ಈ ರೀತಿ ಅವೈಜ್ಞಾನಿಕ ನಡೆಯನ್ನು ತೋರಿಸುತ್ತಿರುವುದು ಬೇಸರದ ಸಂಗತಿ, ಭವಿಷ್ಯದಲ್ಲಾದರೂ ಅಲ್ಲಿನ ವ್ಯವಸ್ಥೆ ಸುಧಾರಿಸಬೇಕಿದೆ ಎಂದು ಹೆಸರು ಹೇಳಲಿಚ್ಛಿಸದ ಅಭ್ಯರ್ಥಿಯೊಬ್ಬರು ತಿಳಿಸಿದ್ದಾರೆ.
ಸಂದರ್ಶನ ನಡೆಸಬೇಕಿದ್ದ ಆಯಾ ವಿಷಯ ಪರಿಣಿತರು ಲಭ್ಯವಾಗದ್ದರಿಂದ ಅಂತಿಮ ಘಳಿಗೆಯಲ್ಲಿ ಸಂದರ್ಶನ ದಿನಾಂಕವನ್ನು ಮುಂದೂಡಬೇಕಾಯಿತು. ಇದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗಿರುವುದು ತಿಳಿದಿದೆ. ಬರುವ ದಿನಗಳಲ್ಲಿ ಇಂತಹ ಸಂದರ್ಭ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು.

  • ಪ್ರೊ. ಚಂದ್ರಕಾಂತ್.ಎಮ್.ಯಾತನೂರ್, ಹಂಗಾಮಿ ಉಪಕುಲಪತಿಗಳು