
ಪಟ್ಟಿ ಶೀಘ್ರ ಬಿಡುಗಡೆ
ಬೆಂಗಳೂರು,ಏ.೪:ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತ ತಲುಪಿದ್ದು, ಇನ್ನು ೩-೪ ದಿನಗಳಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಹೆಸರುಗಳು ಪ್ರಕಟವಾಗಲಿದ್ದು, ಯಾರಿಗೆಲ್ಲ ಟಿಕೆಟ್ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಜೆಡಿಎಸ್‌ನಲ್ಲೂ ೨ನೇ ಪಟ್ಟಿ ವಿಳಂಬವಾಗಿದ್ದು, ಇನ್ನು ಎರಡು ದಿನಗಳಲ್ಲಿ ಪಟ್ಟ ಪ್ರಕಟವಾಗಲಿದೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಈಗ ಹೈಕಮಾಂಡ್‌ನ ಅಂಗಳ ತಲುಪಿದ್ದು, ಕಾಂಗ್ರೆಸ್‌ನ ರಾಜಕೀಯ ಚಟುವಟಿಕೆಗಳು ದೆಹಲಿಗೆ ವರ್ಗಾವಣೆಯಾಗಿವೆ. ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದು, ಟಿಕೆಟ್ ಆಕಾಂಕ್ಷಿಗಳೂ ಸಹ ಲಾಬಿ ನಡೆಸಲು ದೆಹಲಿಯಲ್ಲಿ ಮೊಕ್ಕಾಂ ಹೂಡಿ, ಟಿಕೆಟ್ ಗಿಟ್ಟಿಸಲು ಎಲ್ಲ ರೀತಿಯ ಲಾಬಿ ನಡೆಸಿದ್ದಾರೆ.ಕಾಂಗ್ರೆಸ್ ಪಕ್ಷ ಈಗಾಗಲೇ ೧೨೪ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಬಾಕಿ ಇರುವ ೧೦೦ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, ಪಟ್ಟಿ ಇಂದೇ ಅಂತಿಮವಾದರೂ ಅಭ್ಯರ್ಥಿಗಳ ಹೆಸರನ್ನು ೨-೩ ದಿನಗಳ ನಂತರ ಪ್ರಕಟಿಸುವ ಸಾಧ್ಯತೆಗಳಿವೆ.
ಇಂದು ಮತ್ತು ನಾಳೆ ಬಿಜೆಪಿ ಸಭೆ
ಬಿಜೆಪಿಯಲ್ಲಿ ಅಭ್ಯಥಿಗಳ ಆಯ್ಕೆ ಕಸರತ್ತು ಮುಂದುವರೆದಿದ್ದು, ಇಂದು ಮತ್ತು ನಾಳೆ ನಡೆಯಲಿರುವ ರಾಜ್ಯ ಬಿಜೆಪಿಯ ಚುನಾವಣಾ ಸಮಿತಿಯ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸುವ ಪ್ರಕ್ರಿಯೆಗಳು ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆ ಅಂತಿಮ ಹಂತಕ್ಕೆ ಬಂದಿದೆ.
ರಾಜ್ಯ ಬಿಜೆಪಿಯ ಚುನಾವಣಾ ಸಮಿತಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿ ನಾಳೆ ಪಕ್ಷದ ಕೇಂದ್ರೀಯ ಸಮಿತಿಗೆ ಪಟ್ಟಿಯನ್ನು ಕಳುಹಿಸಲಿದ್ದು, ಏ. ೮ ರಂದು ನಡೆಯಲಿರುವ ಬಿಜೆಪಿಯ ಸಂಸದೀಯ ಮಂಡಳಿಯ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ.
ರಾಜ್ಯ ಬಿಜೆಪಿ ನಾಯಕರು ಒಂದೇ ಬಾರಿಗೆ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ನಿರ್ಧರಿಸಿದ್ದರಾದರೂ ಒಟ್ಟಿಗೆ ಪಟ್ಟಿ ಬಿಡುಗಡೆ ಮಾಡಿದರೆ, ಕೆಲ ಕ್ಷೇತ್ರಗಳಲ್ಲಿ ಟಿಕೆಟ್ ಸಿಗದವರು ಬಂಡಾಯ ಏಳಬಹುದು ಎಂಬ ಹಿನ್ನೆಲೆಯಲ್ಲಿ ಮೊದಲಿಗೆ ಹಾಲಿ ಶಾಸಕರಿರುವ ಹಾಗೂ ಅಷ್ಟೇನೂ ಪೈಪೋಟಿ ಇರದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ತೀರ್ಮಾನಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ.
ಬೆಂಗಳೂರಿನ ಹೊರ ವಲಯದ ಖಾಸಗಿ ರೆಸಾರ್ಟ್‌ನಲ್ಲಿ ಇಂದು ಮತ್ತು ನಾಳೆ ಬೆಳಿಗ್ಗೆ ೧೦ ಗಂಟೆಯಿಂದ ರಾತ್ರಿ ೭ರವರೆಗೂ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಬಿಜೆಪಿ ಜಿಲ್ಲಾ ಪ್ರಮುಖರ ಅಭಿಪ್ರಾಯಗಳನ್ನಾಧರಿಸಿ ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ.
ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಹ ಉಸ್ತುವಾರಿ ಅಣ್ಣಾಮಲೈ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಶೋಭಾಕರಂದ್ಲಾಜೆ, ಭಗವಾನ್, ಕೂಬಾ, ಎ. ನಾರಾಯಣಸ್ವಾಮಿ, ಮಾಜಿ ಮುಖ್ಮಮಂತ್ರಿಗಳಾದ ಜಗದೀಶ್‌ಶೆಟ್ಟರ್, ಡಿ.ವಿ. ಸದಾನಂದ ಗೌಡ, ಸಚಿವ ಆರ್. ಅಶೋಕ್, ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸೇರಿದಂತೆ ಪ್ರಮುಖ ನಾಯಕರುಗಳು ಪಾಲ್ಗೊಳ್ಳುವರು.
ಜೆಡಿಎಸ್ ಪಟ್ಟಿ ೭ಕ್ಕೆ ಬಿಡುಗಡೆ
ಜೆಡಿಎಸ್ ಪಕ್ಷ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ೨ನೇ ಪಟ್ಟಿಯನ್ನು ನಿನ್ನೆ ಪ್ರಕಟಿಸಬೇಕಾಗಿತ್ತಾದರೂ ಪಟ್ಟಿ ಬಿಡುಗಡೆ ಮುಂದಕ್ಕೆ ಹೋಗಿದೆ. ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವುದರಿಂದ ಜೆಡಿಎಸ್ ಪಟ್ಟಿ ಬಿಡುಗಡೆ ವಿಳಂಬವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರು ದೆಹಲಿಗೆ ತೆರಳಿದ್ದು, ನಾಳೆ ದೆಹಲಿಯಿಂದ ಅವರು ವಾಪಸ್ಸಾದ ನಂತರ ಅವರೊಂದಿಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಪಟ್ಟಿ ಬಿಡುಗಡೆ ಮಾಡಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಹಾಗಾಗಿ, ಏ. ೭ರಂದು ಜೆಡಿಎಸ್‌ನ ೨ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಜೆಡಿಎಸ್ ಈಗಾಗಲೇ ೯೩ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.